ಶಿವಮೊಗ್ಗ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಜೆಪಿ ನಡ್ಡಾ ಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದು, ಸೊರಬದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಇದೇ ವೇಳೆ ಸೊರಬದ ಅಧಿದೇವತೆ ರೇಣುಕಾಂಬೆಗೆ ನಮನ ಸಲ್ಲಿಸುವ ಮೂಲಕ ತಮ್ಮ ಭಾಷಣ ಪ್ರಾರಂಭಿಸಿದರು. ಈ ಬಾರಿಯ ಚುನಾವಣೆ ಜನರ ಹಿತ ಕಾಯುವ ಮತ್ತು ಕರ್ನಾಟಕ ಮುನ್ನುಗ್ಗಲು ಇರುವ ಚುನಾವಣೆಯಾಗಿದೆ ಎಂದರು.
ಈ ಪ್ರದೇಶವನ್ನು ಬಂಗಾರಪ್ಪ, ಯಡಿಯೂರಪ್ಪ ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಶೇ.60ರಷ್ಟು ಶೌಚಾಲಯವಿತ್ತು. ನಮ್ಮ ಸರ್ಕಾರ ಬಂದ ಮೇಲೆ ಶೇ. 100ರಷ್ಟು ಶೌಚಾಲಯಗಳ ನಿರ್ಮಾಣವಾಗಿದೆ. 10,000 ಕಿಮೀ ಹೆಚ್ಚುವರಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ದೇಶದ ವಿಕಾಸ ಭರ್ಜರಿಯಾಗಿ ನಡೆಯುತ್ತಿದೆ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಅವರಿಗೀಗ ಸರ್ಕಾರದ ಎಲ್ಲ ಸೌಲಭ್ಯ ಸಿಗಲಿದೆ. ಕುಮಾರಸ್ವಾಮಿ ಕೇವಲ 17 ರೈತರ ಹೆಸರನ್ನು ಪಿ.ಎಂ.ಕೆ.ಎಸ್ ಯೋಜನೆಗೆ ಕಳಿಸಿದ್ದರು. ಈಗ ರಾಜ್ಯದ 54 ಲಕ್ಷ ರೈತರಿಗೆ ಲಾಭ ಸಿಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಏರ್ಪೋರ್ಟ್ ನಿರ್ಮಾಣವನ್ನು ಹೆಚ್ಡಿಕೆ ತಡೆ ಹಿಡಿದಿದ್ದರು. ಪ್ರಧಾನಮಂತ್ರಿ ಆರೋಗ್ಯ ಮಿಷನ್ ಯೋಜನೆಗೆ ಸಿದ್ದರಾಮಯ್ಯ ತಡೆ ಹಾಕಿದ್ದರು. ಇಂತಹ ಸರ್ಕಾರಗಳು ಬೇಕೇ ಎಂದು ಪ್ರಶ್ನೆ ಮಾಡಿದ ಅವರು, ಇನ್ನೂ ಅನೇಕ ಯೋಜನೆಗಳು ಜಾರಿಯಾಗಬೇಕಾದರೆ ಡಬಲ್ ಇಂಜಿನ್ ಸರ್ಕಾರ ಬೇಕು. ನಮ್ಮ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಿದೆ. ಆದರೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಂಪ್ರದಾಯ ಆಧಾರಿತ ಮೀಸಲಾತಿ ನೀಡುವುದಾಗಿ ಹೇಳಿದ್ದಾರೆ. ಯಾರ ಮೀಸಲಾತಿ ತೆಗೆದು ಕೊಡ್ತಾರೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಲಿಂಗಾಯತ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಲಿಂಗಾಯತ ಮುಖಂಡರನ್ನು ಕಡೆಗಣಿಸಿದೆ. ಕಾಂಗ್ರೆಸ್ ಆಡಳಿತ ಬಂದ್ರೆ ಪಿಎಫ್ಐ ನಿಷೇಧ ಹಿಂಪಡೆಯುತ್ತೆ. ಸಿದ್ದರಾಮಯ್ಯ ಸರ್ಕಾರದಲ್ಲಿ 1700 ಪಿಎಫ್ಐ ಕಾರ್ಯಕರ್ತರನ್ನು ಆರೋಪದಿಂದ ಬಿಡುಗಡೆ ಮಾಡಿದರು. ಜೆಡಿಎಸ್ಗೆ ಮತ ಹಾಕುವುದು ಕಾಂಗ್ರೆಸ್ಗೆ ಮತ ಹಾಕಿದಂತೆ. ಕಾಂಗ್ರೆಸ್ಗೆ ಮತ ಹಾಕಿದರೆ ಪಿಎಫ್ಐಗೆ ಹಾಕಿದಂತೆ. ಮಲಪ್ರಭಾ, ಅರ್ಕಾವತಿ, ಸ್ಟೀಲ್ ಫ್ಲೈ ಓವರ್, ಪಿಎಸ್ಐ ನೇಮಕಾತಿ ಹಗರಣ ಸಿದ್ದರಾಮಯ್ಯನವರ ಕಾಲದಲ್ಲಿ ನಡೆದಿತ್ತು. ಬಿಡಿಎ, ಕೊಳಚೆ ಅಭಿವೃದ್ಧಿ ಮಂಡಳಿಯಲ್ಲೂ ಹಗರಣ ನಡೆದಿದ್ದು ಸಿದ್ದರಾಮಯ್ಯ ಕಾಲದಲ್ಲಿಯೇ ಎಂದು ದೂರಿದರು.
ಕಾಂಗ್ರೆಸ್ನವರು ಜೈಲಲ್ಲಿ ಇರ್ತಾರೆ, ಇಲ್ಲ ಬೇಲಲ್ಲಿ ಇರ್ತಾರೆ. ಮತದಾರರು ಮತ್ ಜಾ ಮೋದಿ ಅಂತಾರೆ. ನೀಚ ಶಬ್ದಗಳನ್ನು ಕಾಂಗ್ರೆಸ್ ಬಳಸುತ್ತಿದೆ. ಸೋನಿಯಾ, ರಾಹುಲ್ ಸೂಚನೆಯಂತೆ ಈ ಶಬ್ದ ಬಳಕೆಯಾಗುತ್ತಿವೆ. ಒಮ್ಮೆ ರಾವಣ, ಇನ್ನೊಮ್ಮೆ ಹಾವು ಅಂತಾರೆ. ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಇಂತಹ ಮಾತು ಶೋಭೆ ತರುವುದಿಲ್ಲ. ಇಂತಹ ಮಾತು ಆಡಿದಾಗಲೆಲ್ಲ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಜೆಪಿ ನಡ್ಡಾ ಕಿಡಿ ಕಾರಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಕುಮಾರ ಬಂಗಾರಪ್ಪ, ಕಾಂಗ್ರೆಸ್ನವರಿಗೆ ಎಲೆಕ್ಷನ್ ಬಂದ್ರೆ ಕಲೆಕ್ಷನ್. ಬಿಜೆಪಿಗೆ ಎಲೆಕ್ಷನ್ ಬಂದ್ರೆ ಅದು ಅಭಿವೃದ್ಧಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸೊರಬ ಪಟ್ಟಣದಲ್ಲಿ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 1900 ಕೋಟಿ ರೂಪಾಯಿಯಲ್ಲಿ ಕಳೆದ ವರ್ಷ ಸೊರಬ ಅಭಿವೃದ್ಧಿಪಡಿಸಿದ್ದೇವೆ. ಮುಂದಿನ ನಮ್ಮ ಗುರಿ ಸೊರಬವನ್ನು 5 ಸಾವಿರ ಕೋಟಿ ರೂನಲ್ಲಿ ಅಭಿವೃದ್ಧಿಪಡಿಸುವುದು ಎಂದರು.
ಸುಳ್ಳು ಆಶ್ವಾಸನೆ ನೀಡವುದು, ಬಗರ್ ಹುಕುಂ ನಕಲಿ ಹಕ್ಕುಪತ್ರ ನೀಡಿ ರೈತರಿಗೆ ಮೋಸ ಮಾಡಿರುವುದು, ಜೆಡಿಎಸ್ಗೂ ಮೋಸ ಮಾಡಿರುವುದು, ಅಲ್ಲಿ ಜೆಡಿಎಸ್ ಮುಳುಗಿಸಿ ಬಂದು ನಮ್ಮ ಮುಂದೆ ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಕಾಂಗ್ರೆಸ್ ಹಾಗೂ ಅವರ ಅಭ್ಯರ್ಥಿಗೂ ಧಿಕ್ಕಾರ ಹಾಕಿ ಎಂದು ತಿಳಿಸಿದರು.
ಶಿರಾಳಕೊಪ್ಪದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ, ನಾನು ಶಿಕಾರಿಪುರ ಕ್ಷೇತ್ರವನ್ನು ನಮ್ಮ ತಂದೆಯವರಂತೆಯೇ ಮಾದರಿ ಕ್ಷೇತ್ರವನ್ನಾಗಿಸುವೆ. ನಮ್ಮ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ಒಂದೇ ತಾಯಿ ಮಕ್ಕಳಂತೆ ಇದ್ದಾರೆ. ನಮ್ಮ ತಂದೆ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಪ್ರತಿ ಗ್ರಾಮಕ್ಕೊಂದು ವಿದ್ಯುತ್ ಗ್ರೀಡ್ ಮಾಡುವ ಗುರಿ ಹೊಂದಲಾಗಿದೆ. ತಾಲೂಕಿನಲ್ಲಿ ಬಗರ್ ಹುಕುಂ ರೈತರ ಪರವಾಗಿ ನಾವಿರುತ್ತೇವೆ ಎಂದು ಭರವಸೆ ನೀಡಿದರು.
ಓದಿ: ಮೋದಿ, ಶಾ, ನಡ್ಡಾ ಹೇಳಿಕೆಗಳಿಗೆ ಉತ್ತರಿಸುತ್ತೇನೆ ಯತ್ನಾಳ್ ಹೇಳಿಕೆಗೆಲ್ಲಾ ಉತ್ತರ ಕೊಡಲ್ಲ: ಮಲ್ಲಿಕಾರ್ಜುನ ಖರ್ಗೆ