ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೆಗೌಡರು, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಬಸವರಾಜ ಹೊರಟ್ಟಿ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷರಾದ ವೈ.ಎಸ್.ವಿ.ದತ್ತಾ ಮೊದಲಾದವರು ಮಾ.17ರಂದು ಪ್ರಮುಖ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ.17 ರಂದು ಜೆಡಿಎಸ್ನ ಪ್ರಮುಖ ನಾಯಕರು ಪಕ್ಷದ ಕಾರ್ಯಕರ್ತರು, ಜನ ಪ್ರತಿನಿಧಿಗಳು ಸೇರಿದಂತೆ ಜಿಲ್ಲೆಯ ನಾಯಕರುಗಳನ್ನು ಭೇಟಿ ಮಾಡಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಎಂದು ಘೋಷಿಸಲಾಗಿದೆ. ಮಧು ಅವರು ಅಂದಿನಿಂದ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದರು.
ಈ ಬಾರಿಯೂ ಸಹ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಚುನಾವಣೆ ನಡೆಸುತ್ತೇವೆ. ಡಿ.ಕೆ.ಶಿವಕುಮಾರ್ರಂತಹ ಘಟಾನುಘಟಿ ನಾಯಕರು ಸಹ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಾರೆ. ಪ್ರತಿ ವಿಧಾನಸಭ ಕ್ಷೇತ್ರವಾರು ಉಭಯ ಪಕ್ಷದ ನಾಯಕರುಗಳು ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದರು.
ಹಾಲಿ ಸಂಸದರು ಚುನಾವಣೆ ಮುಗಿಯುವ ತನಕ ರೈಲು ಬಿಡುತ್ತಲೆ ಇರುತ್ತಾರೆ. ವಿಐಎಸ್ಎಲ್ ರೋಗಗ್ರಸ್ತ ಕಾರ್ಖಾನೆ ಎಂದು ಕೇಂದ್ರವೇ ಘೋಷಣೆ ಮಾಡಿದೆ. ಈಗ ಗಣಿ ಮಂಜೂರಾಗಿದೆ ಎಂದರೆ ಹೇಗೆ. ಮೊದಲು ರೋಗಗ್ರಸ್ತ ಕಾರ್ಖಾನೆ ಪಟ್ಟಿಯಿಂದ ಹೆಸರನ್ನು ತೆಗೆಸಲಿ. ಮನಮೋಹನ್ ಸಿಂಗ್ರವರು ಪ್ರದಾನಿಯಾಗಿದ್ದಾಗ ದೇಶ ಸುರಕ್ಷಿತವಾಗಿತ್ತು. ಈಗ ದೇಶದಲ್ಲಿ ರೇಫೆಲ್ ಕಾಗದ ಪತ್ರಗಳೆ ಕಳುವಾಗಿದೆ ಎಂದ್ರೆ ಹೇಗೆ. ಇಂತಹವರು ದೇಶವನ್ನು ಹೇಗೆ ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.