ಶಿವಮೊಗ್ಗ: ಶಿಲೆಯಲ್ಲಿ ಕಲೆಯನ್ನು ಅರಳಿಸಿ, ಜಗದ್ವಿಖ್ಯಾತನಾದ ಅಪ್ರತಿಮ ಕಲಾವಿದ ಜಕಣಾಚಾರಿ ಸರ್ವಕಾಲಕ್ಕೂ ಚಿರಸ್ಥಾಯಿಯಾಗುಳಿದಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಏರ್ಪಡಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿಯವರ ಮೊದಲ ಸಂಸ್ಮರಣಾ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಕಲ್ಯಾಣಿ ಚಾಲುಕ್ಯ ಮತ್ತು ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಮತ್ತು ಹಳೇಬೀಡುಗಳಲ್ಲಿ ಅತ್ಯಂತ ನಾಜೂಕಾದ ಕುಸುರಿ ಕೆತ್ತನೆಗಳಿಂದ ಹಲವಾರು ದೇವಾಲಯಗಳನ್ನು ನಿರ್ಮಿಸಿದ ಜಕಣಾಚಾರಿ ಭಗವತ್ ಸಮೂಹವನ್ನು ತನ್ನೆಡೆಗೆ ಸೆಳೆದುಕೊಂಡು ಪೂಜನೀಯ ಸ್ಥಾನ ಪಡೆದ ಮಹನೀಯ. ಪ್ರಸ್ತುತ ಘನ ಸರ್ಕಾರಗಳು ಕೂಡ ಶಿಲ್ಪಕಲೆಗೆ ಅತಿ ಹೆಚ್ಚಿನ ಕೊಡುಗೆ ನೀಡಿದ ಕಲೆಗಾರನಿಗೆ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸುತ್ತಿವೆ ಎಂದರು.
ಜಕಣಾಚಾರಿ ಒಂದು ಕಲ್ಲಿಗೆ ರೂಪವನ್ನು ನೀಡಿ, ಜನರಲ್ಲಿ ಶ್ರದ್ಧೆ, ಭಕ್ತಿ, ಭಾವವನ್ನು ಮೂಡಿಸುವ ಹಾಗೂ ಗೌರವಯುತ ಸಂಘಟಿತ ಸಮಾಜ ನಿರ್ಮಿಸಿ ಜನಮಾನಸದಲ್ಲಿ ನೆಲೆಯೂರಿದ್ದಾರೆ ಎಂದರು.