ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪರಮಾಪ್ತ ಉಮೇಶ್ ಅವರ ಮನೆಗಳ ಮೇಲೆ ಇಂದು ಐಟಿ ದಾಳಿ ನಡೆದಿದೆ. ಆದ್ರೆ ಬೆಂಗಳೂರು ಹೊರತುಪಡಿಸಿ ಸ್ವಗ್ರಾಮ ಆಯನೂರಿನ ಮನೆಗಳ ಮೇಲೆ ಯಾವುದೇ ಐಟಿ ರೈಡ್ ನಡೆದಿಲ್ಲ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿರುವ ಉಮೇಶ್ ಅವರ ಬಾವ ರಾಜಣ್ಣ ಅವರು, ಐಟಿ ದಾಳಿ ನಡೆದ ವಿಷಯ ಕೇಳಿ ಆಶ್ಚರ್ಯವಾಗಿದೆ. ಯಡಿಯೂರಪ್ಪನವರ ಜೊತೆ ನಿಯತ್ತಾಗಿ ಸೇವೆ ಸಲ್ಲಿಸಿದ್ದಕ್ಕೆ ಐಟಿ ದಾಳಿ ನಡೆದಿದೆ. ಇದು ನಮಗೆಲ್ಲ ಬೇಸರ ಮೂಡಿಸಿದೆ. ಉಮೇಶ್ ಯಡಿಯೂರಪ್ಪನವರ ಜೊತೆ ಇದ್ದಾರೆ ಎಂದು ಖುಷಿಯಾಗಿದ್ದೆವು ಎಂದು ನೋವು ತೋಡಿಕೊಂಡಿದ್ದಾರೆ.
ಉಮೇಶ್ ಬಿಎಂಟಿಸಿಯಲ್ಲಿ ಉದ್ಯೋಗಕ್ಕೆ ಸೇರಿದ ಮೇಲೆ ಯಡಿಯೂರಪ್ಪನವರ ಆಪ್ತ ಸಹಾಯಕನಾಗಿ ಸೇರಿಕೊಂಡಿದ್ದಾರೆ. ಬಿಎಸ್ವೈ ಪ್ರತಿಪಕ್ಷದ ನಾಯಕರಾಗಿದ್ದಾಗಿನಿಂದಲೂ ಸಹ ಉಮೇಶ್ ಅವರ ಜೊತೆ ಇದ್ದಾರೆ. ಬೆಂಗಳೂರು ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಆದರೆ ಉಮೇಶ್ ಅವರ ಸ್ವಗ್ರಾಮ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ಮನೆ ಮೇಲೆ ಯಾವುದೇ ಐಟಿ ದಾಳಿ ನಡೆದಿಲ್ಲ ಎಂದು ಹೇಳಿದ್ದಾರೆ.
ಆಯನೂರು ಗ್ರಾಮದ ಹಾರನಹಳ್ಳಿ ರಸ್ತೆಯಲ್ಲಿ ಉಮೇಶ್ ಅವರ ಪಿತ್ರಾರ್ಜಿತವಾದ ಎರಡು ಮನೆಗಳಿವೆ. ಈ ಮನೆಗಳ ಮೇಲೂ ಸಾಲ ಮಾಡಲಾಗಿದೆ. ಸದ್ಯ ಈ ಮನೆಯಲ್ಲಿ ಉಮೇಶ್ ತಾಯಿ, ಅವರ ಸಹೋದರ ಹಾಗೂ ಆತನ ಪತ್ನಿ ವಾಸವಾಗಿದ್ದಾರೆ. ಈ ಮನೆಗಳು ಬಿಟ್ಟರೆ ಬೇರೆ ಯಾವುದೇ ಆಸ್ತಿಗಳಿಲ್ಲವಂತೆ. ಉಮೇಶ್ ಈಗಾಗಲೇ ಬೆಂಗಳೂರಿನಲ್ಲಿ ವಾಸವಾಗಿದ್ದು, ವರ್ಷಕ್ಕೊಮ್ಮೆ ತಾಯಿಯನ್ನು ನೋಡಲು ಹಾಗೂ ಪಿತೃ ಪೊಜೆಗೆಂದು ಮಾತ್ರ ಬಂದು ಹೋಗುತ್ತಾರಂತೆ.
ಗ್ರಾಮದ ಎಲ್ಲಾ ದೇವಾಲಯಗಳಿಗೆ, ಮಸೀದಿಗಳಿಗೆ ಹಾಗೂ ಮಂದಿರಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದಾರಂತೆ. ಗ್ರಾಮದ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದು ಸ್ನೇಹಿತರು ತಿಳಿಸಿದ್ದಾರೆ. ಉಮೇಶ್ ಆಯನೂರಿನಲ್ಲಿರುವ ಎಂಎಲ್ಸಿ ಆಯನೂರು ಮಂಜುನಾಥ್ ಅವರ ಲೇಔಟ್ ನಲ್ಲಿ ಎರಡು ಅಂತಸ್ತಿನ ಮನೆ ನಿರ್ಮಾಣ ಮಾಡುತ್ತಿದ್ದಾರೆ.