ಶಿವಮೊಗ್ಗ: ನಿರುದ್ಯೋಗಿ ಯುವಕ, ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ಅವಕಾಶ ದೊರೆಯುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಎಸ್. ಚಿದಾನಂದ್ ವಠಾರೆ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರವು ಕೌಶಲ್ಯ ತರಬೇತಿ ಮತ್ತು ಸ್ವಂತ ಉದ್ಯಮ ಆರಂಭಿಸುವ ಯುವಕರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ. ಕೌಶಲ್ಯ ಮತ್ತು ಜ್ಞಾನವು ಒಂದು ದೇಶದ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಕೌಶಲ್ಯ ತರಬೇತಿ ಮೌಲ್ಯವನ್ನು ಸಾಮಾಜಿಕ ಜನಜಾಗೃತಿ ಮೂಲಕ ಯುವಕ ,ಯುವತಿಯರಲ್ಲಿ ಉತ್ಸಾಹ ತುಂಬುವುದು ಮುಖ್ಯ ಎಂದರು.
ಅಡಿಕೆ ಚಹಾ ಮತ್ತು ಉತ್ಪನ್ನಗಳ ಸಂಶೋಧಕ ನಿವೇದನ್ ನೆಂಪೆ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಕಷ್ಟಪಟ್ಟು ಮುಂದೆ ಬರಬೇಕು. ಧೃಡ ಸಂಕ್ಪಲ ಮತ್ತು ಆತ್ಮ ವಿಶ್ವಾಸ ಇದ್ದರೆ ಎಂತವರು ಕೂಡ ಸಾಧಕರಾಗಬಹುದು. ಜೀವನದಲ್ಲಿ ಅವಕಾಶಗಳು ಸಾಕಷ್ಟು ಬಂದು ಒದಗುತ್ತವೆ. ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಾಗ ನಾಲ್ಕು ಜನ ನಮ್ಮನ್ನು ಗುರುತಿಸುತ್ತಾರೆ. ಆಗ ನಾವು ಒಬ್ಬ ನಾಯಕರಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಏನೇ ಸಾಧನೆ ಮಾಡಿ ದೊಡ್ಡ ಮಟ್ಟದಲ್ಲಿದ್ದರೂ ಕೂಡ ನಾವು ಬೆಳೆದು ಬಂದ ಹಾದಿಯನ್ನು ಎಂದೂ ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದ ವ್ಯವಸ್ಥಾಪಕ ಜಿ.ಕೆ. ಧ್ರುವಕುಮಾರ್, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲೆ ಸುರೇಖ, ಮಹಾನಗರ ಪಾಲಿಕೆ ಸದಸ್ಯರುಗಳಾದ ವಿಶ್ವಾಸ್, ಚಂದ್ರಶೇಖರ್, ರಮೇಶ್ ಪಾಟೀಲ್, ಭಾಸ್ಕರ್ ಸೇರಿದಂತೆ ಮತ್ತು ಸಿಬ್ಬಂದಿಗಳು, ಗಣ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.