ಶಿವಮೊಗ್ಗ: ಮಲೆನಾಡಿನಲ್ಲಿ ಮಂಗಗಳ ಹಾವಳಿಯಿಂದ ರೈತರು ಬೆಳೆಯನ್ನು ಉಳಿಸಿಕೊಳ್ಳುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮಂಗಗಳ ಹಾವಳಿ ಕೇವಲ ಹಳ್ಳಿಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಪಟ್ಟಣಗಳಲ್ಲೂ ಅಲ್ಲಲ್ಲಿ ಕಾಣಸಿಗುತ್ತಿವೆ.
ಮಂಗಗಳ ಹಾವಳಿಗೆ ಬೇಸತ್ತ ಮಲೆನಾಡಿನ ಜನಅವುಗಳಿಂದ ತಾವು ಬೆಳೆದ ಬೆಳೆ ಹಾಗೂ ತಮ್ಮನ್ನು ರಕ್ಷಿಸುವಂತೆ ಹೋರಾಟದ ಹಾದಿ ಹಿಡಿದಿದ್ದರು. ಮಲೆನಾಡಿಗರ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸಿದ ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಇದೀಗ ಮಂಕಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿರುವ ಮಂಗಗಳನ್ನು ಸೆರೆಹಿಡಿದು ಒಂದು ಪ್ರದೇಶದಲ್ಲಿ ಹಾಕಿ ಅಲ್ಲಿಯೇ ಅವುಗಳಿಗೆ ಆಹಾರ ಒದಗಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಆರಿಸಿಕೊಂಡಿರುವುದು ಶರಾವತಿ ಹಿನ್ನೀರಿನಲ್ಲಿರುವ ದ್ವೀಪದಂತಹ ನಡುಗಡ್ಡೆಗಳನ್ನು. ದ್ವೀಪದಂತಿರುವ ನಡುಗಡ್ಡೆಗಳಲ್ಲಿ ಮಂಗಗಳನ್ನು ಬಿಟ್ಟರೆ ಅವು ನೀರನ್ನು ದಾಟಿಕೊಂಡು ಊರಿನತ್ತ ಮುಖ ಮಾಡಲು ಸಾಧ್ಯವಿಲ್ಲ. ಆಗ ಮಲೆನಾಡಿನಲ್ಲಿ ತನ್ನಿಂತಾನಾಗೆಯೇ ಮಂಗಗಳ ಹಾವಳಿ ಕಡಿಮೆಯಾಗಲಿದೆ.
ಹೀಗೆ ದ್ವೀಪದಲ್ಲಿ ಬಿಡುವ ಮಂಗಗಳಿಗೆ ನಿರಂತರವಾಗಿ ಆಹಾರ ಒದಗಿಸಲು ಸರ್ಕಾರ ನಿರ್ಧರಿಸಿದೆ. ಒಂದು ವೇಳೆ ಶರಾವತಿ ಹಿನ್ನೀರಿನಲ್ಲಿರುವ ದ್ವೀಪಗಳು ಮಂಕಿ ಪಾರ್ಕ್ ಆಗಿ ಪರಿವರ್ತನೆಯಾದರೆ ಉತ್ತಮ ಪ್ರವಾಸಿ ತಾಣಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅಸ್ಸೋಂ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಮಾತ್ರ ಮಂಕಿ ಪಾರ್ಕ್ ಇವೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಂಕಿ ಪಾರ್ಕ್ ಆದರೆ ದೇಶದ ಮೂರನೇ ಮಂಕಿ ಪಾರ್ಕ್ ಎಂಬ ಹೆಗ್ಗಳಿಕೆ ಬರಲಿದೆ. ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನಲ್ಲಿರುವ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ದ್ವೀಪಗಳಲ್ಲಿ ಗಂಡುಮಂಗಗಳನ್ನೇ ಒಂದು ದ್ವೀಪದಲ್ಲಿ, ಹೆಣ್ಣುಮಂಗಗಳನ್ನು ಒಂದು ದ್ವೀಪದಲ್ಲಿ ಬಿಡಲಾಗುತ್ತದೆ. ಈ ಬಗ್ಗೆ ತಜ್ಞರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆರಂಭಿಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದಾರೆ.
ಈ ಯೋಜನೆ ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾದಲ್ಲಿ ಶಿವಮೊಗ್ಗದಲ್ಲಿ ದೇಶದ ಮೂರನೇ ಮಂಕಿಪಾರ್ಕ್ ನಿರ್ಮಾಣವಾಗಲಿದೆ. ಆದರೆ ಇದಕ್ಕೆ ಸ್ಥಳೀಯರ ವಿರೋಧವು ವ್ಯಕ್ತವಾಗಿದೆ.
ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಶರಾವತಿ ಹಿನ್ನೀರಿನಲ್ಲಿ ಮಂಕಿಪಾರ್ಕ್ ನಿರ್ಮಾಣ ಮಾಡಲು ಉದ್ದೇಶಲಾಗಿದೆ. ಈ ಯೋಜನೆಗೆ ಕೆಲವು ಸ್ಥಳೀಯರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಆದರೆ ವಿರೋಧ ವ್ಯಕ್ತಪಡಿಸಿದವರ ಮನವೊಲಿಸಲಾಗಿದ್ದು, ಶೀಘ್ರದಲ್ಲೇ ಮಂಕಿಪಾರ್ಕ್ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಲಿದೆ.