ಶಿವಮೊಗ್ಗ: ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನಿರೀಕ್ಷಕ ಗುರುರಾಜ್ ಕೆ.ಟಿ ಅವರಿಗೆ ಡಿಎಸ್ಸಿಐ ಎಕ್ಸಲೆನ್ಸ್ ಆವಾರ್ಡ್ 2022ರ ಇಂಡಿಯನ್ ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ. ಗುರುರಾಜ್ ಅವರು ಪೋಕ್ಸೋ ಮತ್ತು ಐಟಿ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಉತ್ತಮ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಶೀಘ್ರವಾಗಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಮೂಲಕ ಆರೋಪಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದರು.
ಮಕ್ಕಳ ಅಶ್ಲೀಲ ಫೋಟೊಗಳನ್ನು ಸೊರಬದ ವ್ಯಕ್ತಿಯೊಬ್ಬ ಇಂಟರ್‌ನೆಟ್ ಮೂಲಕ ಎಲ್ಲೆಡೆ ಕಳುಹಿಸುತ್ತಿದ್ದ. ಈ ಕುರಿತು ಅಂತಾರಾಷ್ಟ್ರೀಯ ಸಂಸ್ಥೆಯೊಂದು ಭಾರತದ ಸೈಬರ್ ಸೆಲ್‌ಗೆ ಮಾಹಿತಿ ರವಾನಿಸಿತ್ತು. ಪ್ರಕರಣವು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಗೆ ಬಂದಿದ್ದು ಗುರುರಾಜ್ ಅವರು ಆತನನ್ನು ಒಂದೇ ದಿನದಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಅಲ್ಲದೇ ಪೋಕ್ಸೊ ಪ್ರಕರಣ ದಾಖಲಾದ ಮೇಲೆ ಸೂಕ್ತ ಸಾಕ್ಷ್ಯಗಳನ್ನು ಹುಡುಕಿ ನ್ಯಾಯಾಲಯಕ್ಕೆ ನೀಡಿದ್ದರಿಂದ ಮಕ್ಕಳ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರಿಗೆ ಕಾನೂನಿನ ರೀತಿ ಶಿಕ್ಷೆಯೂ ಆಗಿತ್ತು. ಇಷ್ಟೇ ಅಲ್ಲದೇ ಒಟಿಪಿ (ಒಟಿಪಿ) ಪಡೆದು ಮೋಸ ಮಾಡಿ ಹಣ ಲಪಟಾಯಿಸುವವರನ್ನು ಸಹ ಉತ್ತರ ಭಾರತದಿಂದ ಹುಡುಕಿ ತಂದು ಶಿಕ್ಷೆ ಆಗುವಂತೆ ಮಾಡಿದ್ದಾರೆ. ಇವರ ಸೇವೆ ಪರಿಗಣಿಸಿ, ರಾಜ್ಯ ಸರ್ಕಾರ ಗುರುರಾಜ್ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು.
ಈ ಪ್ರಶಸ್ತಿಯನ್ನು ಕೇಂದ್ರ ಗೃಹ ಖಾತೆಯ ವತಿಯಿಂದ ನೀಡಲಾಗುತ್ತದೆ. ಹರಿಯಾಣದ ಗುರುಗ್ರಾಮದಲ್ಲಿ ಅಧಿಕಾರಿಯನ್ನು ಗೌರವಿಸಲಾಗಿದೆ. ಇದು ರಾಜ್ಯದ ಅಧಿಕಾರಿಗೆ ಸಿಕ್ಕಿರುವ ಮೊದಲ ಪ್ರಶಸ್ತಿಯೂ ಹೌದು. ಗುರುರಾಜ್ ಕೆ.ಟಿ ಅವರು ಹಾಲಿ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಕಿತ್ತೂರು ಕೋಟೆ ಪುನರ್ ನಿರ್ಮಾಣಕ್ಕೆ ಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ