ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ 10 ರಿಂದ 15 ವರ್ಷಗಳ ಕಾಲ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರನ್ನು ಖಾಯಂಗೊಳಿಸಬೇಕು ಹಾಗೂ ಹೊರಗುತ್ತಿಗೆ ರದ್ದುಪಡಿಸಬೇಕೆಂದು ಆಗ್ರಹಿಸಿ ಹೊರಗುತ್ತಿಗೆ ಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಸಿಮ್ಸ್ ಮೆಡಿಕಲ್ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಅವರು, ಇಂದಿನಿಂದ ತಮ್ಮ ಬೇಡಿಕೆ ಈಡೇರಿಸುವವರೆಗೂ ಸಹ ಪ್ರತಿಭಟನೆ ಕೈ ಬಿಡದಿರಲು ನಿರ್ಧಾರ ಮಾಡಲಾಗಿದೆ. ಶಿವಮೊಗ್ಗ ಮೆಡಿಕಲ್ ಕಾಲೇಜಿನ ಅಧೀನದಲ್ಲಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ವೀಪರ್ಸ್, ಗ್ರುಪ್ ಡಿ ನರ್ಸ್, ಸ್ಟಾಫ್‌ನರ್ಸ್, ಫಾರ್ಮಸಿಸ್ಟ್, ಲ್ಯಾಬ್ ಅಟೆಂಡರ್ಸ್ ಸೇರಿ ಸುಮಾರು 300ಕ್ಕೂ ಅಧಿಕ ಕಾರ್ಮಿಕರು ಹೊರ ಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರೆಲ್ಲ ಕಳೆದ 15 ವರ್ಷಗಳಿಂದ ಇಂದಲ್ಲ ನಾಳೆ ತಮಗೆ ಆಸ್ಪತ್ರೆಯಲ್ಲಿ ಖಾಯಂ ಆಗುತ್ತದೆ. ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಇದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಆದರೆ, ಈವರೆಗೂ ಯಾರನ್ನು ಒಳ ಗುತ್ತಿಗೆಯನ್ನಾಗಿಯೂ ತೆಗದುಕೊಂಡಿಲ್ಲ ಹಾಗೂ ಖಾಯಂ ಸಹ ಮಾಡಿಲ್ಲ. ನಾವು 15 ವರ್ಷಗಳಿಂದ ದುಡಿಯುತ್ತಿದ್ದೇವೆ. ನಮ್ಮ ಕೆಲಸಕ್ಕೆ ಸಮಾನ ವೇತನ ಸಹ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಹೊರ ಗುತ್ತಿಗೆಯವರನ್ನು ಒಳಗುತ್ತಿಗೆಯನ್ನಾಗಿ ಮಾಡಿ ಕೊಳ್ಳಿ ಎಂದು ಹಿಂದೆ ಸಾಕಷ್ಟು ಪ್ರತಿಭಟನೆ ನಡೆಸಿದಾಗ ಪ್ರತಿಭಟನಾ ಸ್ಥಳಕ್ಕೆ ಬಂದ ಜನಪ್ರತಿನಿಧಿಗಳು ನಿಮ್ಮ ಬೇಡಿಕೆ ಈಡೇರಿಸುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿ ಪ್ರತಿಭಟನೆ ವಾಪಸ್ ಪಡೆಯುವಂತೆ ಮಾಡಿದ್ದರು. ಆದರೆ, ಇದುವರೆಗೂ ನಮ್ಮ ಬೇಡಿಕೆ ಈಡೇರಿಸಿಲ್ಲ. ತಮ್ಮ ನ್ಯಾಯಬದ್ಧ ಹೋರಾಟಕ್ಕಾಗಿ ಚೌಡೇಶ್ವರಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಹೊರಗುತ್ತಿಗೆ ಕಾರ್ಮಿಕರ ಸಂಘ ರಚನೆ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರತಿಭಟನೆಯಲ್ಲಿ ಎಲ್ಲಾ ಶಿಫ್ಟ್‌ನ ಹೊರಗುತ್ತಿಗೆ ಕಾರ್ಮಿಕರು ಭಾಗಿಯಾಗಿದ್ದರು. ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆಯಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇನ್ನೆರಡು ದಿನಗಳಲ್ಲಿ ಸ್ವಚ್ಛತೆ, ಸೇವೆ ಇಲ್ಲದೆ ಗಬ್ಬು ನಾರುವ ಸ್ಥಿತಿ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಲಾದ್ರೂ ಜನಪ್ರತಿನಿಧಿಗಳು ಹೊರಗುತ್ತಿಗೆ ಕಾರ್ಮಿಕರ ಪರ ಒಲುವು ತೋರಬೇಕಿದೆ.