ಶಿವಮೊಗ್ಗ: ಜಾನುವಾರುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ 57 ರಾಸುಗಳು ಚರ್ಮಗಂಟು ರೋಗಕ್ಕೆ ಬಲಿಯಾಗಿದ್ದು, ಸುಮಾರು 30 ಸಾವಿರ ರಾಸುಗಳು ರೋಗದಿಂದ ಬಳಲುತ್ತಿವೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಹಲವೆಡೆ ರೋಗ ಬಾಧಿಸಿದ್ದು, ಸೊರಬ ತಾಲೂಕು ಹೀರೆಚೌಟಿ ಗ್ರಾಮದ ಮಂಜುನಾಥ್ ಎಂಬುವರ ಹೋರಿಯು ಚರ್ಮಗಂಟು ರೋಗದಿಂದ ಬಳಲುತ್ತಿರುವುದು ಮನಕಲಕುವಂತಿದೆ. ಹೋರಿಯು ಕಳೆದ ಒಂದು ವಾರದಿಂದ ಮಲಗಲೂ ಆಗದೇ ಪರಿತಪಿಸುತ್ತಿದೆ.
ಚರ್ಮಗಂಟು ರೋಗದಿಂದ ಅದರ ಸ್ನಾಯುಗಳು, ನರಗಳು ಮಲಗಲು ಕೂಡ ಸಹಕರಿಸುತ್ತಿಲ್ಲ. ಸದ್ಯ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಲಸಿಕೆ ಸಿಗದ ಕಾರಣ, ಖಾಸಗಿ ವೈದ್ಯರಲ್ಲಿ ತೋರಿಸಿದ್ದಾರೆ. ಇವರು ಇದಕ್ಕೆ ಆ್ಯಂಟಿ ಬಯೋಟಿಕ್ ಹಾಗೂ ನೋವು ಸಹಿಸುವ ಲಸಿಕೆ ನೀಡಿದ್ದಾರೆ.
ಚರ್ಮಗಂಟು ರೋಗದ ಲಸಿಕೆ ವಿತರಣೆ ಬಗ್ಗೆ ಪಶು ಸಂಗೋಪನೆ ಇಲಾಖೆಯ ಜಿಲ್ಲಾ ನಿರ್ದೇಶಕರಾದ ಶಿವಯೋಗಿ ಎಲಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ 57 ರಾಸುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿವೆ. ಸುಮಾರು 30 ಸಾವಿರ ರಾಸುಗಳು ರೋಗದಿಂದ ಬಳಲುತ್ತಿವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಗೆ 99 ಸಾವಿರ ಗೋಟ್ ಫಾಕ್ಸ್(Goatpox) ಲಸಿಕೆ ಬಂದಿದೆ. ಹೆಚ್ಚು ಬಾಧಿತವಾದ ಶಿಕಾರಿಪುರ ತಾಲೂಕಿಗೆ ಸುಮಾರು 50 ಸಾವಿರದಷ್ಟು ಲಸಿಕೆ ಕಳುಹಿಸಲಾಗಿದೆ. ಸೊರಬ ತಾಲೂಕಿಗೆ ಸುಮಾರು 13 ಸಾವಿರ ಸೇರಿ ತಾಲೂಕುವಾರು ರವಾನಿಸಲಾಗಿದೆ.
ರೋಗವು ಹೆಚ್ಚಾಗಿ ಕಂಡು ಬಂದ ಕಡೆಗಳಲ್ಲಿ ಆಯಾ ಕೇಂದ್ರದಿಂದ ಲಸಿಕೆ ನೀಡಲು ಪ್ರಾರಂಭಿಸಲಾಗಿದೆ. ಸದ್ಯ ಎಲ್ಲ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿದೆ. ರೈತರು ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಏಳು ದಿನಗಳಿಂದ ಕೂತಿಲ್ಲ ಈ ಹೋರಿ: ಕಾರಣ ಚರ್ಮಗಂಟು ರೋಗ