ಶಿವಮೊಗ್ಗ: ತಾಕತ್ ಇದ್ರೆ, ನನ್ನ ಪ್ರಕರಣವನ್ನು ಹೈಕೋರ್ಟ್, ಸುಪ್ರೀಂಕೋರ್ಟ್ ಸೇರಿದಂತೆ ಎಲ್ಲ ಕಡೆ ತೆಗೆದುಕೊಂಡು ಹೋಗಿ ಗೆದ್ದು ಬರಲಿ. ಬಳಿಕ ನಾನು ಡಿ.ಕೆ. ಶಿವಕುಮಾರ್ ಹೇಳಿದಂತೆ ಕೇಳುತ್ತೇನೆ. ಸುಮ್ಮನೆ ಹುಚ್ಚು ಹುಚ್ಚಾಗಿ ಎಲ್ಲದಕ್ಕೂ ಟೀಕೆ ಮಾಡೋದ್ರಲ್ಲಿ ಅರ್ಥವಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಯಾಕಂದ್ರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನೇ ನಾನು ನೋಡಿಲ್ಲ. ಡಿ.ಕೆ. ಶಿವಕುಮಾರ್ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡು, ಇದಕ್ಕೆ ಅವರೇ ಕಾರಣ ಎಂದರೆ ಸರಿನಾ?. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮೈ ಮೇಲೆ ಜ್ಞಾನ ಇಲ್ಲದ ಹಾಗೆ ಮಾತನಾಡಬಾರದು. ನನ್ನ ವಿಚಾರದಲ್ಲಿ ಸರಿಯಾಗಿ ತನಿಖೆ ನಡೆಯಬೇಕು ಅನ್ನುತ್ತಾರೆ. ಅದೇ ಸೋನಿಯಾ ಗಾಂಧಿ ವಿಚಾರದಲ್ಲಿ ಮಾತ್ರ ಯಾರು ವಿಚಾರಣೆ ಮಾಡಬಾರದೇ ಎಂದು ಪ್ರಶ್ನಿಸಿದರು.
ಬಿಜೆಪಿಯವರ ಮೇಲೆ ಕ್ಲೀನ್ ಚಿಟ್ ಬಂದರೆ ಅದು ಕಾನೂನು ಬಾಹಿರ, ಇದೇ ಕಾಂಗ್ರೆಸ್ ಧೋರಣೆ. ಈ ರೀತಿ ಕುತಂತ್ರ ರಾಜಕಾರಣ ರಾಜ್ಯದಲ್ಲಿ ನಡೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಜಮೀರ್ ಮೂರು ಜನ ಸಾಕು. ರಾಜ್ಯದಲ್ಲಿ ಪ್ರತಿಪಕ್ಷ ಉಳಿಯಬೇಕು ಎಂಬುದು ನಮ್ಮ ಆಸೆ, ಆದರೆ ಕಾಂಗ್ರೆಸ್ ನಡವಳಿಕೆಯಿಂದ ಅದು ಉಳಿಯುವುದೇ ಅನುಮಾನವಾಗಿದೆ. ಈಗ ಪ್ರತಿಪಕ್ಷ ಪ್ರತಿಭಟನೆ ನಡೆಸದ ಕಾರಣ ಸಂಘಟನೆಗಳು ನಡೆಸುತ್ತಿವೆ ಎಂದು ಕಿಡಿಕಾರಿದರು.
ಇದನ್ನೂ ಓದಿ: 'ರಾಜಕಾರಣದಲ್ಲಿ ಕಬಡ್ಡಿಯೂ ಗೊತ್ತಿರಬೇಕು, ಚದುರಂಗದ ಆಟವೂ ಗೊತ್ತಿರಬೇಕು'