ಶಿವಮೊಗ್ಗ: ಹಿಂದೂಗಳು ಇರೋ ಕಡೆ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸಿದರೆ ಖಂಡಿತಾ ಸೋಲುತ್ತಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಿಎಂ ಆಗುವ ಭ್ರಮೆಯಲ್ಲಿದ್ದಾರೆ. ಬಾದಾಮಿಯಿಂದ ಸ್ಪರ್ಧಿಸುತ್ತೇನೆ ಎಂದಿದ್ದ ಸಿದ್ದರಾಮಯ್ಯ, ಈಗ ಅಲ್ಲಿ ನಿಲ್ಲೋದಿಲ್ಲ ಎನ್ನುತ್ತಿದ್ದಾರೆ.
ಆದರೆ ಸಿದ್ದರಾಮಯ್ಯ ನಿಲ್ಲೋದು ಮುಸ್ಲಿಮರು ಜಾಸ್ತಿ ಇರೋ ಕಡೆ ಮಾತ್ರ. ರಾಹುಲ್ ಗಾಂಧಿ ಹೇಗೆ ಕೇರಳಕ್ಕೆ ಬಂದು ನಿಂತರೋ, ಹಾಗೆ ಇವರು ಅತಿ ಹೆಚ್ಚು ಮುಸ್ಲಿಮರು ಇರುವ ಚಾಮರಾಜಪೇಟೆಯಲ್ಲಿಯೇ ನಿಲ್ಲೋದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಹಿಂದೂಗಳಿಗೆ ದ್ರೋಹ: ಹಿಂದೂಗಳಿರುವ ಜಾಗದಲ್ಲಿ ನಿಂತರೆ, ಖಂಡಿತಾ ಸೋಲುತ್ತಾರೆ. ಯಾಕೆ ಎಂದರೆ ಕಾಂಗ್ರೆಸ್ನವರು ಹಿಂದೂಗಳಿಗೆ ದ್ರೋಹ ಮಾಡಿದ್ದಾರೆ. ಸಿದ್ದರಾಮೋತ್ಸವ ಮುಗಿದ ಮೇಲೆ ಕಾಂಗ್ರೆಸ್ ನಾಟಕ ಬಯಲಾಗಲಿದೆ. ಹುಟ್ಟುಹಬ್ಬ ಆಚರಿಸಲ್ಲ ಎಂದು ಹೇಳುವ ಸಿದ್ದರಾಮಯ್ಯ, ರಾಜ್ಯದ ಇತಿಹಾಸದಲ್ಲಿ ಯಾವ ದೊಡ್ಡ ಮಹಾಪುರುಷರು ಮಾಡದಂತೆ ಜನ್ಮದಿನದ ಕಾರ್ಯಕ್ರಮ ಮಾಡಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭಿನಂದಿಸುತ್ತೇನೆ. 80ನೇ ವರ್ಷದ ಹುಟ್ಟು ಹಬ್ಬವನ್ನು ಪ್ರವಾಹ ಪರಿಸ್ಥಿತಿ ಕಾರಣ ಆಚರಿಸಲ್ಲ ಎಂದು ಖರ್ಗೆಯವರು ಹೇಳಿದ್ದು, ಅಭಿನಂದನೀಯ. ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಿಸಿಕೊಳ್ಳಲು ನನ್ನ ತಕರಾರು ಇಲ್ಲ. ಆದರೆ, ಸುಮಾರು 75 ಲಕ್ಷ ರೂ. ಖರ್ಚು ಮಾಡಿ, ಸಿದ್ದರಾಮಯ್ಯ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ಅವರು ಇದನ್ನು ನಾನು ಮಾಡುತ್ತಿಲ್ಲ. ನನ್ನ ಅಭಿಮಾನಿಗಳು ಮಾಡುತ್ತಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಜನ ನನ್ನನ್ನು ಸಚಿವರನ್ನಾಗಿ ಮಾಡಿದ್ದು, ನಾನ್ಯಾಕೆ ಕ್ಷೇತ್ರ ಬಿಟ್ಟುಕೊಡಬೇಕು: ಸಚಿವ ಎಸ್.ಟಿ.ಸೋಮಶೇಖರ್
ಬೆಂಗಳೂರಿನಲ್ಲಿ ನಡೆದ ಒಕ್ಕಲಿಗರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ನಲ್ಲಿ ಎಸ್.ಎಂ. ಕೃಷ್ಣ ನಂತರ ಯಾರೂ ನಮ್ಮಲ್ಲಿ ಮುಖ್ಯಮಂತ್ರಿಯಾಗಿಲ್ಲ. ಈಗ ಅವಕಾಶ ಒದಗಿ ಬಂದಿದೆ. ದಯವಿಟ್ಟು ಇದನ್ನು ಬಳಸಿಕೊಳ್ಳಬೇಕು. ಇದು ಜಾತಿವಾದವಲ್ಲವೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಮತ್ತು ನಾನು ಎಲ್ಲಾ ಜಾತಿ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುವ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.