ಶಿವಮೊಗ್ಗ: ಹೊಸನಗರ ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿಯ ಕಮಲ ಅರಳಿದೆ. ಅಂತಂತ್ರವಾಗಿದ್ದ ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಅಧ್ಯಕ್ಷರಾಗಿ ಗುಲಾಬಿ ಮರಿಯಪ್ಪ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣವೇಣಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾದ ಕಾರಣ ಗುಲಾಬಿ ಮರಿಯಪ್ಪ ಅನಾಯಾಸವಾಗಿ ಆಯ್ಕೆಯಾದರು. ಆದ್ರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾದ ಕಾರಣ ಪೈಪೋಟಿ ಹೆಚ್ಚಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಕೃಷ್ಣವೇಣಿ, ಚಂದ್ರಕಲಾ ನಾಗರಾಜ್ ಹಾಗೂ ಶಾಹೀನ ನಾಸೀರ್ ನಾಮಪತ್ರ ಸಲ್ಲಿಸಿದ್ದರು. ಆದರೆ ಶಾಹೀನ್ ನಾಸೀರ್ ನಾಮಪತ್ರ ವಾಪಸ್ ಪಡೆದುಕೊಂಡರು. ಇದರಿಂದ ಬಿಜೆಪಿಯ ಕೃಷ್ಣವೇಣಿ ಹಾಗೂ ಕಾಂಗ್ರೆಸ್ನ ಚಂದ್ರಕಲಾ ನಾಗರಾಜ್ ನಡುವೆ ನೇರ ಹಣಾಹಣಿ ನಡೆಸಿದರು.
ಈ ವೇಳೆಗಾಗಲೇ ಕಾಂಗ್ರೆಸ್ ನಿಂದ ನಾಗರಾಜ್ ಹಾಗೂ ಜೆಡಿಎಸ್ ನಿಂದ ಓರ್ವರು ಬಿಜೆಪಿಗೆ ಬಂದ ಕಾರಣ ಬಿಜೆಪಿಗೆ 6 ಸದಸ್ಯರ ಬೆಂಬಲ ಸಿಕ್ಕಿತು. ಕೃಷ್ಣವೇಣಿ ಹಾಗೂ ಚಂದ್ರಕಲಾ ನಾಗರಾಜ್ ನಡುವೆ ಚುನಾವಣೆ ನಡೆಯಿತು. ಕೃಷ್ಣವೇಣಿ ಪರ ಶಾಸಕ ಹರತಾಳು ಹಾಲಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ರವರು ಕೈ ಎತ್ತುವ ಮೂಲಕ ಕೃಷ್ಣವೇಣಿ ರವರು 8 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್ನ ಚಂದ್ರಕಲಾ ನಾಗರಾಜ್ರವರು 5 ಮತಗಳಿಗೆ ತೃಪ್ತಿ ಪಡೆದುಕೊಂಡರು. ಇತ್ತ ಬಿಜೆಪಿಯ ಗೆಲುವು ಸಾಧಿಸುತ್ತಿದ್ದಂತೆಯೇ ಹೊರಗಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು.