ಶಿವಮೊಗ್ಗ : ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಿಗೆ ಹರಿದು ಹಂಚಿ ಹೋಗಿರುವ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿ ಹೊಸನಗರದಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೊಸನಗರದ ಮಾವಿನಕೊಪ್ಪದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿಯವರೆಗೂ ಸಾಗಿತು. ಹೊಸನಗರದ ಮೂಲೆಗದ್ದೆ ಮಠ ಹಾಗೂ ಈಡಿಗ ಸಮಾಜದ ರೇಣುಕಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊಸನಗರ ಕ್ಷೇತ್ರ ತೀರ್ಥಹಳ್ಳಿ ಹಾಗೂ ಸಾಗರಕ್ಕೆ ಹರಿದು ಹಂಚಿ ಹೋಗಿದೆ. ಜನಸಂಖ್ಯೆ ಆಧಾರದ ಮೇಲೆ ನಡೆದ ಪುನರ್ ವಿಂಗಡಣೆಯು ಅವೈಜ್ಞಾನಿಕವಾಗಿದ್ದು, ಹೊಸನಗರ ತಾಲೂಕಿನ ಜನತೆ ಕ್ಷೇತ್ರವಿಲ್ಲದೆ ಅನ್ಯಾಯಕ್ಕೊಳಗಾಗಿದ್ದಾರೆ.
ಓದಿ:ಮಹಿಳಾ ದಿನಾಚರಣೆ ಪ್ರಯುಕ್ತ ತೃತೀಯಲಿಂಗಿಗಳಿಗೆ ಸನ್ಮಾನ
ಒಂದು ಕಡೆ ಮುಳಗಡೆ ಪ್ರದೇಶ ಇನ್ನೊಂದು ಕಡೆ ಕ್ಷೇತ್ರವಿಲ್ಲದೆ ಎರಡು ಕಡೆ ಅನ್ಯಾಯವಾಗಿದೆ. ಇದರಿಂದ ಈ ಕ್ಷೇತ್ರದ ಜನತೆಗೆ ಅಭಿವೃದ್ದಿಯ ಜೊತೆಗೆ ಶಾಸಕರ ಅವಶ್ಯಕತೆ ಇದೆ. ಪ್ರಥಮ ಹಂತವಾಗಿ ತಾಲೂಕು ಮಟ್ಟದ ಹೋರಾಟ ನಡೆಸಲಾಗಿದೆ. ಮುಂದೆ ಹೊಸನಗರದಿಂದ ಶಿವಮೊಗ್ಗದವರೆಗೂ ಪಾದಯಾತ್ರೆಯ ಮೂಲಕ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಯಿತು.