ಶಿವಮೊಗ್ಗ: ರಾಜ್ಯಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಯಡಿಯೂರಪ್ಪನವರು ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಅವರೇ ನಮಗೆ ರೋಲ್ ಮಾಡೆಲ್ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ದರ್ಜೆಯ ಸ್ಥಾನಮಾನ ತಿರಸ್ಕರಿಸಿದ ಯಡಿಯೂರಪ್ಪನವರು ತಿರಸ್ಕಾರದ ಭಾವನೆ ಹೊಂದಿಲ್ಲ. ಬದಲಾಗಿ ಅದು ಅವರ ದೊಡ್ಡತನ ಮತ್ತು ಉದಾರತೆ ಎಂದರು.
ಔರಾದ್ಕರ್ ವರದಿ ಬಗ್ಗೆ ಪ್ರತಿಕ್ರಿಯಿಸುತ್ತಾ, ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ನಂತರ ಬೆಳಗ್ಗೆ 11 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ನಂತರ ವರದಿ ಕುರಿತು ಅಧ್ಯಯನ ಮಾಡಿ ಏನು ಸುಧಾರಣೆ ಮಾಡಬಹುದು, ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.
ಖಾತೆ ಹಂಚಿಕೆ ವಿಚಾರ: ನೂತನ ಸಚಿವ ಸಂಪುಟದ ರಚನೆ ನಂತರ ಕೆಲ ಸಚಿವರಿಗೆ ಆಗಿರುವ ಅಸಮಾಧಾನದ ಕುರಿತು, ಎಲ್ಲಾ ಸರ್ಕಾರದಲ್ಲಿ ಖಾತೆ ಹಂಚಿಕೆ ಮಾಡಿದಾಗ, ತಮಗಿಷ್ಟವಾದ ಖಾತೆ ಬರದೇ ಹೋದಾಗ ಸಹಜವಾಗಿಯೇ ಅಪಸ್ವರ ಬರುತ್ತದೆ. ಅದು ನಮ್ಮ ಪಕ್ಷದಲ್ಲಿ ಕಡಿಮೆ ಇದೆ. ಮೂರ್ನಾಲ್ಕು ಜನ ಅಪಸ್ವರ ಮಾಡಿದ್ದಾರೆ. ಮುಖ್ಯಮಂತ್ರಿಗಳು ಅವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ ಎಂದರು.