ಶಿವಮೊಗ್ಗ: ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಉದ್ಯಮಿಯೊಬ್ಬರು ತಮ್ಮ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಸರ್ಕಾರ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯುತ್ತಿದ್ದಾರೆ. ಈ ಸಂಬಂಧ ಕಾಂಗ್ರೆಸ್ನವರು ಅಭಿಯಾನ ನಡೆಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಉದ್ಯಮಿಯೊಬ್ಬರು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಸೇರಿದಂತೆ ಇತರರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಕುರಿತು ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಅಭಿಯಾನ ನಡೆಸುತ್ತಿದೆ ಎಂದು ಅರವಿಂದ್ ಲಿಂಬಾವಳಿಯನ್ನು ಬಂಧಿಸಲಾಗದು. ಲಿಂಬಾವಳಿ ಸೇರಿದಂತೆ ಹಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಖಂಡಿತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಘಟನೆ ಸಂಬಂಧ ಕಾಂಗ್ರೆಸ್ ನವರು ಅಭಿಯಾನ ನಡೆಸುತ್ತಿದ್ದಾರೆ ಎಂದು ಯಾರನ್ನೂ ಬಂಧನ ಮಾಡಲಾಗದು. ಅಥವಾ ಅಭಿಯಾನ ಮಾಡಿಲ್ಲ ಎಂದು ಬಂಧಿಸದೆ ಇರಲೂ ಆಗದು. ಎಲ್ಲವೂ ಕಾನೂನಿನ ಅಡಿಯಲ್ಲಿ ನಡೆಯುತ್ತದೆ. ಅವರು ಶಾಸಕರಾಗಿರಲಿ ಅಥವಾ ಜನ ಸಾಮಾನ್ಯರಾಗಿರಲಿ ಕಾನೂನಿನಡಿ ತಪ್ಪಿತಸ್ಥರಾಗಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ಔರಾದ್ಕರ್ ವರದಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ : ಔರಾದ್ಕರ್ ವರದಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಹಿರಿಯ ಅಧಿಕಾರಿಗಳ ಸಂಬಳದಲ್ಲಿ ವ್ಯತ್ಯಾಸ ಆಗಿದೆ. ಔರಾದ್ಕರ್ ವರದಿಯಂತೆ ಶೇ.80 ರಷ್ಟು ಸಿಬ್ಬಂದಿಗೆ ಲಾಭ ಸಿಗಲ್ಲ. ಈ ಕುರಿತು ಅನ್ಯಾಯ ಆಗದಂತೆ ಭತ್ಯೆ ಸರಿಪಡಿಸುವ ಕೆಲಸ ಆಗುತ್ತದೆ ಎಂದರು. ಸಿದ್ದೇಶ್ವರ ಶ್ರೀಗಳ ನಿಧನರಾದ ತಕ್ಷಣ ಸುಮಾರು 1500 ಸಿಬ್ಬಂದಿಯನ್ನು ಅಲ್ಲಿ ನಿಯೋಜನೆ ಮಾಡಲಾಯಿತು. ಆಮೇಲೆ ನಿಧನದ ಬಗ್ಗೆ ಘೋಷಣೆ ಮಾಡಲಾಯಿತು. ಜನರ ಭಾವೋದ್ವೇಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಾರದೆಂಬ ಉದ್ದೇಶವಿತ್ತು. ಅಂತಿಮ ದರ್ಶನ ವ್ಯವಸ್ಥೆ ಶಾಂತಿಯುತವಾಗಿರಲು ಕಾರಣಿಕರ್ತರಾದ ಪೊಲೀಸರಿಗೆ ಇದೇ ವೇಳೆ ಸಚಿವರು ಅಭಿನಂದನೆ ತಿಳಿಸಿದರು.
ಶಿವಮೊಗ್ಗ ಕಮಿಷನರೇಟ್ ಗೆ ಸತತ ಪ್ರಯತ್ನ: ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತವೆ. ಇದರಿಂದ ಶಿವಮೊಗ್ಗವನ್ನು ಕಮಿಷನರೇಟ್ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಇದಕ್ಕೆ ಕೇಂದ್ರದ ಮಾರ್ಗಸೂಚಿ ಅಡ್ಡಿ ಬರುತ್ತಿದೆ. ಆದರೂ ಪ್ರಯತ್ನ ನಡೆಸುತ್ತಿರುವುದಾಗಿ ಸಚಿವರು ಹೇಳಿದರು. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿಯೇ ಹೈಟೆಕ್ ಜೈಲು ನಿರ್ಮಾಣ ಮಾಡಲಾಗುತ್ತಿದೆ. ವಿಶೇಷ ಪ್ರಕರಣದ ಖೈದಿಗಳನ್ನು ಅಲ್ಲಿ ಇರಿಸಲಾಗುತ್ತದೆ. ರಾಜ್ಯಗಳಿಗೆ ಒಂದರಂತೆ ಹೈಟೆಕ್ ಜೈಲು ನಿರ್ಮಾಣವಾಗಿದ್ದು, ನಮ್ಮ ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿದೆ ಎಂದರು.
ಮುರುಘಾ ಶ್ರೀಗಳ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ: ಮುರುಘಾ ಶ್ರೀಗಳ ವಿಚಾರದಲ್ಲಿ ಅಂತೆ ಕಂತೆಗಳ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ. ಮುರುಘಾ ಶ್ರೀಗಳ ವಿಚಾರದಲ್ಲಿ ಸರ್ಕಾರವು ಯಾವುದೇ ಹಸ್ತಕ್ಷೇಪವನ್ನು ಮಾಡಿಲ್ಲ. ಈಗಾಗಲೇ ಮುರುಘಾ ಶ್ರೀಗಳ ವಿಚಾರದಲ್ಲಿ ಅನೇಕರನ್ನು ಬಂಧಿಸಲಾಗಿದೆ. ನಮ್ಮ ಪೊಲೀಸರು ಸರಿಯಾಗಿಯೇ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದರು.
ಅಡಿಕೆ ವಿಚಾರದಲ್ಲಿ ನನ್ನ ಮಾತನ್ನು ಕಾಂಗ್ರೆಸ್ ತಪ್ಪಾಗಿ ಅರ್ಥೈಸಿದೆ : ಅಡಿಕೆ ಬೆಳೆ ವಿಸ್ತರಣೆ ಆಗುತ್ತಿರುವ ಕುರಿತು ನಾನು ಸದನದಲ್ಲಿ ವ್ಯಕ್ತಪಡಿಸಿದ ಆತಂಕವನ್ನು ಕಾಂಗ್ರೆಸ್ ತಪ್ಪಾಗಿ ಅರ್ಥೈಸಿದೆ. ಸದನದಲ್ಲಿ ರೇವಣ್ಣನವರು ಅಡಕೆ ಬೆಳೆಗೆ ಮನರೇಗಾ ಯೋಜನೆ ನೀಡುವಂತೆ ಕೇಳಿಕೊಂಡಾಗ ನಾನು ಅಡಕೆ ನಮ್ಮ ಸಾಂಪ್ರದಾಯಿಕ ಬೆಳೆಯಾಗಿದೆ. ಬಯಲು ಸೀಮೆಯಲ್ಲಿ ಬೆಳೆ ವಿಸ್ತರಣೆ ಮಾಡುವುದಕ್ಕೆ ನಾನು ಆತಂಕ ವ್ಯಕ್ತಪಡಿಸಿದ್ದೆ. ಇದರಿಂದ ಬಯಲು ಸೀಮೆಯಲ್ಲಿ ಅಡಕೆಗೆ ಪ್ರೋತ್ಸಾಹ ಬೇಡ ಎಂದು ಹೇಳಿದ್ದಾಗಿ ಸಚಿವರು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ : ನಾಯಿ ನಿಯತ್ತಿನ ಪ್ರಾಣಿ, ನಾನು ಜನರಿಗೆ ನಿಯತ್ತಿನಿಂದ ಕೆಲಸ ಮಾಡುತ್ತಿರುವೆ: ಸಿದ್ದರಾಮಯ್ಯಗೆ ಸಿಎಂ ತಿರುಗೇಟು