ಶಿವಮೊಗ್ಗ : ಶಂಕಿತ ಉಗ್ರರ ಮೂಲ ತೀರ್ಥಹಳ್ಳಿ ಆಗಿದ್ದರೂ ಅವರ ಸಹವಾಸ ಕರಾವಳಿಯದ್ದು. ಆದ್ದರಿಂದ ಯುವಕರು ಮತಾಂಧತೆಗೆ ಒಳಗಾಗುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬಂಧಿತ ಶಂಕಿತ ಉಗ್ರರ ಕುರಿತು ತೀರ್ಥಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕರಾವಳಿಯಲ್ಲಿನ ಮತಾಂಧರ ಸಹವಾಸದಿಂದ ಈ ರೀತಿಯಾಗಿದೆ. ಇಂತಹ ವ್ಯಕ್ತಿಗಳು ಬೆಳೆಯುವ ಮುನ್ನವೇ ಬಂಧಿಸಿದ ಶಿವಮೊಗ್ಗ ಪೊಲೀಸರನ್ನು ಪುರಸ್ಕರಿಸುತ್ತೇವೆ. ಮುಂದೆ ನಡೆಯಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ಇನ್ನು ಬಂಧಿತ ಶಂಕಿತ ಉಗ್ರರು ಏನೆಲ್ಲ ನಂಟು ಹೊಂದಿದ್ದಾರೆ.
ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಯಾರಿಗೆ ಯಾವ ಭಾಷೆ ಬಳಸಬೇಕೋ ಅದನ್ನು ಬಳಸಬೇಕಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಪೊಲೀಸರು ಈ ರೀತಿ ಕೆಲಸ ಮಾಡಲು ಆಗುತ್ತಿರಲಿಲ್ಲ, ನಮ್ಮ ಸರ್ಕಾರ ಪೊಲೀಸರ ಕೆಲಸಕ್ಕೆ ಮೂಗು ತೂರಿಸಲು ಹೋಗುವುದಿಲ್ಲ ಎಂದು ಹೇಳಿದರು.
ಮತಾಂಧತೆಗೆ ಒಳಗಾದಾಗ ಇಂತಹ ಕೃತ್ಯ ನಡೆಯುತ್ತದೆ : ಈ ಹಿಂದೆ ಯುಎಪಿಎ ಕೇಸ್ ಹಾಕಿದಾಗ ಅನಾವಶ್ಯಕವಾಗಿ ಹಾಕ್ತಿದ್ದಾರೆ ಎಂದು ಹೇಳುತ್ತಿದ್ದರು. ಈಗ ಏನಾಯ್ತು, ಇಂತಹ ಪ್ರಕರಣ ಬೆಳಕಿಗೆ ಬರುತ್ತಿವೆ. ಇವರ ಮುಖ ನೋಡಿದರೆ, ಹಿನ್ನೆಲೆ ನೋಡಿದರೆ ಏನೂ ಇಲ್ಲ ಅನಿಸುತ್ತದೆ. ಆದರೆ ಮತಾಂಧತೆಗೆ ಒಳಗಾದಾಗ ಇಂತಹ ಕೃತ್ಯ ನಡೆಯುತ್ತದೆ ಎಂದು ಹೇಳಿದರು.
ಶಂಕಿತ ಉಗ್ರರಿಗೆ ಕರಾವಳಿ, ಕೇರಳದ ನಂಟು ಇದೆ. ಹೀಗಾಗಿಯೇ ಇಂತಹ ಕೃತ್ಯ ನಡೆಯುತ್ತಿದೆ. ಈ ಹಿಂದೆ ತೀರ್ಥಹಳ್ಳಿಯಲ್ಲಿ ಸ್ಯಾಟ್ ಲೈಟ್ ಪೋನ್ ಬಳಕೆ ಆಗಿದೆ .ಇಂತಹ ಕೃತ್ಯಗಳನ್ನು ನಮ್ಮ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದರು.
ನಮ್ಮ ಪೊಲೀಸರು ಒಳ್ಳೆ ಕೆಲಸ ಮಾಡುತ್ತಿದ್ದಾರೆ : ಈ ಹಿಂದೆ ದೀಪಾವಳಿಯಲ್ಲಿ ಪಟಾಕಿ ಹೊಡೆದ ಹಾಗೆ ಬಾಂಬ್ ಸ್ಪೋಟ ಆಗುತಿತ್ತು. ಇದೀಗ ಮೋದಿ ಅವರು ಬಂದ ನಂತರ ಇದೆಲ್ಲಾ ನಿಯಂತ್ರಣಕ್ಕೆ ಬರುತ್ತಿದೆ. ಮೊನ್ನೆ ಪಿಎಫ್ ಐ ಮುಖಂಡರ ಬಂಧನಕ್ಕೆ ಎನ್ ಐಎ ಟೀಂ ಸಹ ಬಂದಿತ್ತು. ನಮ್ಮ ಪೊಲೀಸರು 15 ಜನರನ್ನು ಬಂಧಿಸಿದ್ದಾರೆ ಎನ್ ಐಎ 7 ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದರು. ನಮ್ಮ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಲ್ಬುರ್ಗಿ ಸಿಪಿಐಗೆ ಉನ್ನತ ಚಿಕಿತ್ಸೆ : ಕಲ್ಬುರ್ಗಿಯಲ್ಲಿ ಒಬ್ಬ ಇನ್ಸ್ ಪೆಕ್ಟರ್ ಮೇಲೆ 30 ಜನ ದಾಳಿ ಮಾಡಿದ್ದಾರೆ. ಆತನ ಮೇಲೆ ಏನು ಆಗಬಹುದೋ ಎಲ್ಲಾ ಆಗಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ನಾನು ಅಧಿಕಾರಿಗಳಿಗೆ ತಿಳಿಸಿದ್ದೆನೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಒಳ್ಳೆಯ ಕಡೆ ಚಿಕಿತ್ಸೆ ಕೊಡಿಸಿ ಎಂದಿದ್ದೇನೆ. ಬೆಂಗಳೂರಿಗೆ ಕರೆ ತಂದು ಚಿಕಿತ್ಸೆ ಕೊಡಲು ವಿಳಂಬವಾಗುತ್ತದೆ ಇದರಿಂದ ಹೈದರಾಬಾದ್ ನ ಆಸ್ಪತ್ರೆಗೆ ಕರೆದೊಯ್ಯಲು ನಮ್ಮ ಅಧಿಕಾರಿಗಳು ಸಿದ್ದತೆ ನಡೆಸುತ್ತಿದ್ದಾರೆ ಎಂದರು.
ನಿರುದ್ಯೋಗಿಗಳು ಮತಾಂಧರಾದರೆ ದೇಶ ನಡೆಸೋದು ಹೇಗೆ ? : ದೇಶದಲ್ಲಿ ನಿರುದ್ಯೋಗದಿಂದ ಯುವಕರು ಅಡ್ಡದಾರಿ ಹಿಡಿಯುತ್ತಿದ್ದಾರೆ ಎಂದು ಹೇಳಿದ್ದ ನಲಪಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉದ್ಯೋಗ ಇದ್ದವರು ಏನೇನು ಮಾಡಿದ್ದಾರೆ ಎಂದು ಗೊತ್ತು, ಆದರೆ, ನಿರುದ್ಯೋಗಿಗಳು ಎಲ್ಲರೂ ಮತಾಂಧರಾಗಿ ಬಾಂಬ್ ತಯಾರಿಸಲು ಹೋದರೆ ಈ ದೇಶದಲ್ಲಿ ಶಾಂತಿ ನೆಲೆಸಲು ಹೇಗೆ ಸಾಧ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಅವರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಪೇಸಿಎಂ ಅಭಿಯಾನಕ್ಕೆ ವಿರೋಧ : ಪೇ ಸಿಎಂ ಕಾಂಗ್ರೆಸ್ ನ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ. ಅವರಿಗೆ ನಾಚಿಕೆ ಆಗಬೇಕು. ನೇರಾನೇರ ರಾಜಕಾರಣ ಮಾಡುವ ಯೋಗ್ಯತೆ ಇಲ್ಲ. ರಮೇಶ್ ಕುಮಾರ್ ಈ ಹಿಂದೆ ಮೂರು ತಲೆ ಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದರು. ಅವರಿಗೆ ಯಾವ ಪೇಸಿಎಂ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ನವರನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನರಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ಗಿಮಿಕ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಬಂಧಿತ ಪಿಎಫ್ಐ ಪ್ರಮುಖರ ಮನೆಯಲ್ಲಿ ಸಾವರ್ಕರ್ ಪುಸ್ತಕ: ಆರೋಪಿಗಳಿಗಿದೆ ಕೆಲ ರಾಜಕಾರಣಿಗಳ ನಂಟು