ಶಿವಮೊಗ್ಗ: ಮಾದಕ ವಸ್ತುಗಳು ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಇದೆ. ಇದನ್ನು ಜಪ್ತಿ ಮಾಡುವ ಹಾಗೂ ಮಟ್ಟ ಹಾಕುವ ಕಾರ್ಯ ನಿರಂತರವಾಗಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿಕಾರಿಪುರದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳು ಶಿವಮೊಗ್ಗ ಜಿಲ್ಲೆ ಸೇರಿದಂತೆ ಬೆಂಗಳೂರು, ಮಂಗಳೂರು ಎಲ್ಲಾ ಕಡೆ ಇದೆ. ರಾಜ್ಯದಲ್ಲಿ ಮಾದಕ ವಸ್ತುಗಳನ್ನು ಮಟ್ಟ ಹಾಕಬೇಕು ಅಂತ ಮೊದಲ ಸಭೆಯಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದ್ರು.
ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಹತ್ತು ಟನ್ಗೂ ಅಧಿಕ ಪ್ರಮಾಣದ ಮಾದಕ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿ ಸುಟ್ಟು ಹಾಕಿದ್ದಾರೆ. ಈ ಮಾದಕ ವಸ್ತುಗಳನ್ನು ಹಾಗೇ ಬಿಟ್ಟಿದ್ದರೆ ಏನೇನೋ ಅನಾಹುತಗಳು ನಡೆಯುತ್ತಿದ್ದವು ಎಂದ್ರು.
ಅಕ್ರಮ ವಲಸಿಗರನ್ನು ಹೊರಹಾಕಲಾಗುವುದು:
ರಾಜ್ಯದ ಎಲ್ಲಾ ಕಡೆ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ರಾಜ್ಯದಿಂದ ಹೊರ ಹಾಕಲಾಗುವುದು. ಈ ಕುರಿತು ಅಧಿಕಾರಿಗಳ ಜೊತೆ ಮಾತನಾಡಿರುವುದಾಗಿ ಗೃಹ ಸಚಿವರು ತಿಳಿಸಿದ್ರು.
ರಸ್ತೆಯಲ್ಲಿ ನಿಲ್ಲಿಸಿ ವಾಹನ ಸವಾರರಿಗೆ ದಂಡ ಹಾಕುವುದರಿಂದ ಇತರರಿಗೆ ಕಿರಿಕಿರಿ ಆಗುತ್ತದೆ ಎಂಬ ಉದ್ದೇಶದಿಂದ ಸ್ಪಾಟ್ ಫೈನ್ ಹಾಕಬಾರದು ಎಂದು ತಿಳಿಸಿದ್ದೇನೆ. ಈ ಕುರಿತು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.