ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣೇಶ ಮೂರ್ತಿಯ ನಿಮಜ್ಜನ ಮೆರವಣಿಗೆ ಹಿನ್ನೆಲೆ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ. ನಗರದಲ್ಲಿ ಆರ್ಪಿಎಫ್ ತುಕಡಿ, ಕೆಎಸ್ಆರ್ಪಿ ತುಕಡಿ, ಡಿಆರ್ ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್ ಸಿಬ್ಬಂದಿ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ. ನಿಮಜ್ಜನ ಮೆರವಣಿಗೆ ಮೇಲೆ ಕಣ್ಣಿಡಲು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.
ಪೊಲೀಸ್ ನಿಯೋಜನೆ: ಇಬ್ಬರೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 19 ಪೊಲೀಸ್ ಉಪ ಅಧೀಕ್ಷಕರು, 46 ಪೊಲೀಸ್ ನಿರೀಕ್ಷಕರು, 71 ಉಪ ಪೊಲೀಸ್ ನಿರೀಕ್ಷಕರು, 1970 ಪೊಲೀಸ್ ಸಿಬ್ಬಂದಿ, 700 ಗೃಹರಕ್ಷಕ ದಳ ಸಿಬ್ಬಂದಿ, 200 ಆರ್ಪಿಎಫ್ ಸಿಬ್ಬಂದಿ, 15 ಕೆಎಸ್ಆರ್ಎಫ್ ತುಕಡಿ, 15 ಡಿಆರ್ ತುಕಡಿಗಳನ್ನು ನಿಯೋಜಿಸುವ ಮೂಲಕ ನಗರಾದ್ಯಂತ ಬಂದೋಬಸ್ತ್ ಆಯೋಜಿಸಲಾಗಿದೆ.
ರಾರಾಜಿಸುತ್ತಿವೆ ಸಾವರ್ಕರ್ ಕಟೌಟ್ಗಳು: ಇಂದು ಶಿವಮೊಗ್ಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣೇಶ ಮೂರ್ತಿಯ ನಿಮಜ್ಜನ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆ ನಗರವನ್ನು ಅಂಲಕರಿಸಲಾಗಿದ್ದು, ಎಲ್ಲಿ ನೋಡಿದರೂ ಸಾವರ್ಕರ್ ಕಟೌಟ್ಗಳನ್ನು ಹಾಕಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಒಂದು ದಿನ ಮುಂಚೆ ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಕ್ಕದಲ್ಲಿ ಸಾವರ್ಕರ್ ಭಾವಚಿತ್ರ ಹಾಕಿರೋದನ್ನ ವಿರೋಧಿಸಿ ಗಲಾಟೆ ಆಗಿ ಪ್ರತಿಭಟನೆ ಸಹ ನಡೆದಿತ್ತು. ನಂತರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಶಿವಮೊಗ್ಗದ ಎಎ ಸರ್ಕಲ್ನಲ್ಲಿ ಸಾವರ್ಕರ್ ಭಾವಚಿತ್ರ ಹಾಕಿರೋದನ್ನು ಅನ್ಯ ಕೋಮಿನ ಯುವಕರು ತೆರವುಗೊಳಿಸಿದ್ದರು.
ಎರಡು ಕೋಮಿನ ನಡುವೆ ಗಲಾಟೆ: ಇದಾಗುತ್ತಿದಂತೆ ಶಿವಮೊಗ್ಗದಲ್ಲಿ ಎರಡು ಕೋಮಿನ ನಡುವೆ ಗಲಾಟೆ ಪ್ರತಿಭಟನೆ ನಡೆದು ಓರ್ವನಿಗೆ ಚಾಕು ಇರಿಯಲಾಗಿತ್ತು. ಇದೆಲ್ಲದ್ದಕ್ಕೂ ಕಾರಣವಾಗಿರುವುದು ಸಾವರ್ಕರ್ ಭಾವಚಿತ್ರ ತೆರವು. ಹಾಗಾಗಿ, ಈ ಬಾರಿ ಹಿಂದೂ ಮಹಾಸಭಾ ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆಯ ಪ್ರಮುಖ ರಸ್ತೆಯ ಎಲ್ಲ ಕಡೆ ಹಾಗೂ ನಗರದ ನೆಹರೂ ರಸ್ತೆಯ ಸಿಟಿ ಸೆಂಟರ್ ಮಾಲ್ ಮುಂಭಾಗ ಸಾವರ್ಕರ್ ಮಹಾದ್ವಾರ ಹಾಗೂ ಸಾವರ್ಕರ್ ಪ್ರತಿಮೆ ಇರಿಸಲಾಗಿದೆ.
ಜೊತೆಗೆ ನಗರದ ರಾಜಬೀದಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಾವರ್ಕರ್ ಕಟೌಟ್ಗಳನ್ನು ಹಾಕಲಾಗಿದೆ. ಒಟ್ಟಾರೆ ನಗರದಲ್ಲಿ ಎಲ್ಲಿ ನೋಡಿದರೂ ಸಾವರ್ಕರ್ ಕಟೌಟ್ಗಳು ರಾರಾಜಿಸುತ್ತಿವೆ.
ಓದಿ: ಸಾವರ್ಕರ್ ಫೋಟೊ ವಿವಾದ.. ಅಂಬೇಡ್ಕರ್, ಬಸವಣ್ಣ ಫೋಟೊ ಹಂಚಿದ ಯುವಕರು