ಶಿವಮೊಗ್ಗ: ಹಿಂದೂ ಸಂಘಟನೆಗಳ ಮಹಾಮಂಡಳಿ ವತಿಯಿಂದ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸಾಂಪ್ರದಾಯಿಕವಾಗಿ ಮೆರವಣಿಗೆ ಮಾಡುವ ಮೂಲಕ ಗಣಪತಿ ಮೂರ್ತಿಯನ್ನು ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ವಾದ್ಯಗಳೊಂದಿಗೆ ಮೆರವಣಿಗೆ: ಪ್ರತಿ ವರ್ಷದಂತೆ ಈ ವರ್ಷವೂ ಕುಂಬಾರ ಬೀದಿಯ ಕಲಾವಿದ ಗಣೇಶ್ ಅವರ ಮನೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ತಯಾರಿಸಲಾಗಿತ್ತು. ಗಣೇಶ್ ಅವರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕೋಟೆ ಭೀಮೇಶ್ವರ ದೇವಸ್ಥಾನಕ್ಕೆ ತರಲಾಯಿತು. ಕಲಾತಂಡಗಳು, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಪ್ರದಕ್ಷಿಣೆ, ವಿಶೇಷ ಪೂಜೆ: ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮೂರ್ತಿಯನ್ನು ಹೊತ್ತು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ದೇಗುಲದ ಆವರಣದಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಇದನ್ನೂ ಓದಿ: ಕಾನೂನು ಪ್ರಕಾರವೇ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ: ಜಗದೀಶ್ ಶೆಟ್ಟರ್
ಸಾವರ್ಕರ್ ಪರ ಘೋಷಣೆ: ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆಗೆ ವೀರ ಸಾವರ್ಕರ್ ಕಾರಣಿಕರ್ತರು. ಹಾಗಾಗಿ ಇವತ್ತು ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ, ವೀರ ಸಾವರ್ಕರ್ ಪರವಾಗಿ ಘೋಷಣೆ ಕೂಗಲಾಯಿತು. ಕೋಟೆ ರಸ್ತೆಯಿಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿರುವ, ಶ್ರೀ ಭೀಮೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ವೀರ ಸಾವರ್ಕರ್ ಮಹಾದ್ವಾರ ಸಹ ಸ್ಥಾಪಿಸಲಾಗಿದೆ.