ಶಿವಮೊಗ್ಗ: ಹಿಂದೂ ಮಹಾ ಮಂಡಳಿ ಗಣೇಶನ ಮೆರವಣಿಗೆ ದಿನ ನಗರದಲ್ಲಿ ಕಟ್ಟಲಾಗಿದ್ದ ಕೇಸರಿ ಬಾವುಟ ತೆಗೆದು ಹಾಕಿದ್ದಕ್ಕೆ ಹಿಂದೂ ಸಂಘಟನೆಗಳು ವಿರೋಧ ಮಾಡಿವೆ. ಶಿವಪ್ಪ ನಾಯಕ ವೃತ್ತದ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದೂ ಮಹಾ ಮಂಡಳಿ ಗಣಪನ ರಾಜಬೀದಿ ಉತ್ಸವಕ್ಕಾಗಿ ನಗರವನ್ನು ಕೇಸರಿಮಯವನ್ನಾಗಿ ಮಾಡಲಾಗಿತ್ತು. ಓಂ ಗಣಪತಿ ನಿಮಜ್ಜನ ಮೆರವಣಿಗೆ ಮುಗಿದ ಮೇಲೆ ಕೇಸರಿ ಬಾವುಟ ಹಾಗೂ ಬಂಟಿಂಗ್ಸ್ಗಳನ್ನು ತೆರವು ಮಾಡಲಾಗುವುದು ಎಂದು ಅಲಂಕಾರ ಸಮಿತಿ ತಿಳಿಸಿತ್ತು. ಅದರಂತೆ ನಗರದ ವಿವಿಧ ವೃತ್ತಗಳಲ್ಲಿ ಮರವಣಿಗೆ ಹಾದು ಹೋಗುವ ಮಾರ್ಗದಲ್ಲಿ ಅಲಂಕಾರ ಮಾಡಲಾಗಿತ್ತು. ಕಟ್ಟಡಗಳ ಮೇಲೆ ಕೇಸರಿ ಬಾವುಟಗಳನ್ನು ಸಹ ಕಟ್ಟಲಾಗಿತ್ತು.
ಆದರೆ, ಶುಕ್ರವಾರ ಸಂಜೆ ಕಸ್ತೂರು ಬಾ ಪ್ಲೆಕ್ಸ್ ಹೋರ್ಡಿಂಗ್ಸ್ ಮೇಲೆ ಕಟ್ಟಿದ್ದ ಕೇಸರಿ ಬಾವುಟವನ್ನು ತೆರವು ಮಾಡಲಾಗಿತ್ತು. ಇದರಿಂದ ಅಲಂಕಾರ ಸಮಿತಿ ನಿಮಜ್ಜನೆ ಬಳಿಕ ವಿವಿಧೆಡೆ ಕಟ್ಟಲಾಗಿರುವ ಧ್ವಜಗಳನ್ನು ನಾವೇ ತೆಗೆದುಕೊಳ್ಳುತ್ತೇವೆ. ಇದರಿಂದ ನಾವು ಕಟ್ಟಿದ್ದ ಸ್ಥಳದಿಂದ ತೆರವು ಮಾಡಿರುವ ಧ್ವಜವನ್ನು ಪುನಃ ಅದೇ ಸ್ಥಳದಲ್ಲಿ ಕಟ್ಟಬೇಕು ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಎಸ್ಪಿ ಆಗಮಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಎಸ್ಪಿ ಮಿಥುನ್ ಕುಮಾರ್ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ್ದರು.
ಬಳಿಕ ತೆರವುಗೊಳಿಸಿದ್ದ ಸ್ಥಳದಲ್ಲಿಯೇ ಪೊಲೀಸರು ಕೇಸರಿ ಧ್ವಜಗಳನ್ನು ಕಟ್ಟಿಸಿದರು. ನಂತರ ಅಲಂಕಾರ ಸಮಿತಿ ಸದಸ್ಯರು ಅಲ್ಲಿಂದ ವಾಪಸ್ ಆಗಿದ್ದಾರೆ. ಅಲ್ಲಿ ನೆರೆದಿದ್ದ ಯುವಕರನ್ನು ಕಳುಹಿಸಿದ ಬಳಿಕ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ಅಲಂಕಾರದ ವಿಚಾರವಾಗಿ ಸಣ್ಣ ಗೊಂದಲ ಉಂಟಾಗಿತ್ತು. ಎಲ್ಲರೊಟ್ಟಿಗೆ ಮಾತನಾಡಿ ಇದ್ದ ಗೊಂದಲವನ್ನು ನಿವಾರಿಸಿದ್ದೇವೆ. ಕೆಲವೊಮ್ಮೆ ಸಣ್ಣಪುಟ್ಟ ವಿಷಯಕ್ಕೆ ಈ ರೀತಿ ಘಟನೆ ನಡೆಯುತ್ತದೆ. ಸದ್ಯ ಯಾವುದೇ ಸಮಸ್ಯೆ ತಲೆದೋರಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ದಾವಣಗೆರೆ ಹಿಂದೂ ಮಹಾಸಭಾ ಗಣೇಶ ನಿಮಜ್ಜನದಲ್ಲಿ 5 ಲಕ್ಷ ಜನ: ಡಿಜೆ ಸದ್ದಿಗೆ ಯುವತಿಯರಿಂದ ಮಸ್ತ್ ಡ್ಯಾನ್ಸ್