ಶಿವಮೊಗ್ಗ: ಜಿಲ್ಲೆಯಲ್ಲಿ ವೀರ ಶಿವಮೂರ್ತಿ, ವಿಶ್ವನಾಥ ಶೆಟ್ಟಿ, ಗೋವಿಂದ್ ರಾಜ್, ಗೋಕುಲ್ ಅವರನ್ನು ಹತ್ಯೆ ಮಾಡಲಾಯಿತು. ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಮಾಡಿ ಹೆಚ್ಚು ದಿನ ಕಳೆಯುವುದರೊಳಗೆ ರುದ್ರೇಶ್, ಪ್ರವೀಣ್ ನೆಟ್ಟಾರು, ಕುಟ್ಟಪ್ಪ, ಸೌಮ್ಯ ಭಟ್ ಮೊದಲಾದವರ ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ 3ನೇ ತ್ರೈಮಾಸಿಕ ಪ್ರಾಂತ ಸಮ್ಮೇಳನದ ಪ್ರಾಂತೀಯ ಕಾರ್ಯಕರ್ತರ ಸಮಾಗಮ, ಸಾರ್ವಜನಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ನಾನು ಈ ರೀತಿ ಹೇಳಿಕೆ ಕೊಟ್ಟರೆ ಬಿಜೆಪಿ ಸಂಸದೆ ಎಂದು ಕರೆಯುತ್ತಾರೆ. ಹಿಂದುತ್ವದ ರಕ್ಷಣೆಗಾಗಿಯೇ ಬಿಜೆಪಿ ಸಂಸದೆಯಾಗಿದ್ದೇನೆ. ನನ್ನನ್ನು ಸಾಯಿಸಲು ಬೆದರಿಕೆ ಬರುತ್ತಿದೆ. ಆದ್ರೆ, ಅವರಿಗೆ ಎದುರಿಗೆ ಬನ್ನಿ ಎಂದು ಸವಾಲು ಒಡ್ಡುತ್ತೇನೆ. ನಾರಿ ಶಕ್ತಿ ಹೇಗಿರುತ್ತದೆ?, ಸನಾತನ ಶಕ್ತಿ ಹೇಗಿರುತ್ತದೆ ಎಂದು ತೋರಿಸುತ್ತೇನೆ. ಸನ್ಯಾಸಿ ಸಾಯುವುದಿಲ್ಲ, ಸತ್ತ ಮೇಲೆ ಸನ್ಯಾಸಿಯಾಗುತ್ತಾರೆ. ಸತ್ತರೂ ಪುನರ್ ಜನ್ಮ ಪಡೆಯುತ್ತೇವೆ ಎಂದರು.
ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಜನಿವಾರ, ಧೋತಿ ಧರಿಸಿದರೆ ಹಿಂದೂ ಆಗುವುದಿಲ್ಲ. ಹಿಂದೂವಿಗೆ ಅಪಮಾನ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು, ಹಿಂದೂಗಳು ಈಗ ಜಾಗೃತರಾಗಿದ್ದಾರೆ. ಹಿಂದೂಗಳು ಸಿಡಿದೇಳದಿದ್ದರೆ ದೇಶ ಸುರಕ್ಷಿತವಾಗಿ ಇರುತ್ತಿರಲಿಲ್ಲ. ಅತಿಥಿ ದೇವೋಭವ ಎಂದು ರೋಹಿಂಗ್ಯಾಗಳನ್ನು ಭಾರತದಲ್ಲಿ ಬಿಟ್ಟುಕೊಂಡೆವು. ಈಗ ಅವರು ಉಗ್ರ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಆರೋಪಿಸಿದರು.
ನರೇಂದ್ರ ಮೋದಿ ಸುಮ್ಮನೆ ಪ್ರಧಾನಿ ಆಗಲಿಲ್ಲ, ಅವರ ತನು ಮನ ದೇಶಕ್ಕೆ ಅರ್ಪಣೆ ಇದೆ. ಗೋದ್ರಾ ಹತ್ಯಾಕಾಂಡದ ನಂತರ ಅಮೆರಿಕ ವೀಸಾ ನಿರಾಕರಿಸಿತ್ತು. ಈಗ ಹಸ್ತಲಾಘವ ಮಾಡುತ್ತಿದೆ. ಪ್ರಪಂಚದ ದೊಡ್ಡ ದೊಡ್ಡ ದೇಶಗಳಲ್ಲಿ ಭಾರತದ ಧ್ವಜ ಹಿಡಿದರೆ ಸಾಕು ಆತ ಸುರಕ್ಷಿತವಾಗುತ್ತಾನೆ ಎಂಬ ಮನೋಭಾವನೆ ಬಂದಿದೆ. ಸಂಸತ್ ಮೇಲೆ ದಾಳಿ, 26/11 ಮುಂಬೈ ದಾಳಿಯಾದಾಗಲೂ ಪಾಕಿಸ್ತಾನದ ಕಡೆ ಬೆರಳು ತೋರಿಸಲಿಲ್ಲ. ಮೋದಿ ಬಂದ ಮೇಲೆ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತಿದ್ದಾರೆ. ಸೇನೆಗೆ ಆತ್ಮಸ್ಥೆರ್ಯ ತುಂಬಿದ್ದಾರೆ ಎಂದರು.
ಎಚ್ಚೆತ್ತುಕೊಳ್ಳಿ : ಲವ್ ಜಿಹಾದ್ ಮಾಡುವವರಿಗೆ ಉತ್ತರ ಕೊಡಿ. ಯಾವ ಸಮಯ ಬರುತ್ತೋ ಗೊತ್ತಿಲ್ಲ, ಆತ್ಮ ರಕ್ಷಣೆಗಾಗಿ ಹೋರಾಟ ಮಾಡಬೇಕಾಗುತ್ತದೆ. ಹರ್ಷ ಸೇರಿದಂತೆ ಹಲವರು ಹಿಂದೂ ಕಾರ್ಯಕರ್ತರ ಮೇಲೆ ನಡೆದ ದಾಳಿ ನಮ್ಮ ಮೇಲೂ ಆಗಬಹುದು. ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂ ಬಾಂಬ್ಗಳಂತೆ ಸಿದ್ಧಪಡಿಸಬೇಕು. ನಮ್ಮ ಕುಟುಂಬದ, ನಮ್ಮ ಪ್ರದೇಶದ ಹಾಗೆ ದೇಶದ ರಕ್ಷಣೆಗೆ ಸಿದ್ಧರಾಗಬೇಕು. ಧರ್ಮದ ಪಕ್ಷದಲ್ಲಿದ್ದರೆ ಯಾವುದಕ್ಕೂ ಹೆದರಬೇಕಾಗಿಲ್ಲ ಎಂದರು.
ಏಕರೂಪ ನಾಗರಿಕ ಸಂಹಿತೆ ಬರಬೇಕು: ಸಿಎಎ ವಿರುದ್ಧ ಪ್ರತಿಭಟನೆ ಬೇಕಿರಲಿಲ್ಲ. ಆದರೂ ಪ್ರತಿಭಟನೆ ನಡೆಸಿದರು. ನಮಗೆ ಏಕರೂಪ ನಾಗರಿಕ ಸಂಹಿತೆ ಬೇಕಿದೆ. ಜನಸಂಖ್ಯಾ ನಿಯಂತ್ರಣ ದೇಶದಲ್ಲಿ ಆಗಬೇಕಿದೆ. ಮಹಿಳೆಯರ, ಮಕ್ಕಳ ಆರೋಗ್ಯ ದೃಷ್ಟಿಯಿಂದು ಅವಶ್ಯಕ. ಆರೋಗ್ಯ ಪೂರ್ಣ ಸಮಾಜಕ್ಕೆ ಇದು ಅಗತ್ಯ. ಆದರೆ, ಇದಕ್ಕೂ ಕೆಲವರು ವಿರೋಧ ಮಾಡ್ತಿದ್ದಾರೆ. ನಾನು ಇದನ್ನು ಸಂಸತ್‌ನಲ್ಲಿ ಮಾತನಾಡುವೆ. ನಾವು ಹಿಂದೂಗಳು, ಭಾರತ ಹಿಂದೂ ರಾಷ್ಟ್ರವಾಗಬೇಕು. ಹಿಂದೂ ರಾಷ್ಟ್ರ ಆದರೆ ದೇಶದ ಜನತೆ ಸುಖವಾಗಿರುತ್ತಿದೆ ಎಂದರು.
ಡಿ ಕೆ ಶಿವಕುಮಾರ್ಗೆ ಟಾಂಗ್: ಕಾಂಗ್ರೆಸ್‌ನ ಇಲ್ಲಿನ ನಾಯಕರೊಬ್ಬರು ಇತ್ತೀಚೆಗೆ ಹಿಂದೂಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಪೇಟ, ಧೋತಿ ಧರಿಸಲಾರಂಭಿಸಿದ್ದಾರೆ. ಆದರೆ, ಅವರ ಪೇಟ ಬೀಳುತ್ತದೆ. ಹಿಂದೂಗಳಾಗಿ ಯಾರನ್ನು ತಯಾರಿಸಲಾಗುವುದಿಲ್ಲ. ಬದಲಿಗೆ ಜನ್ಮತಃ ಹಿಂದೂಗಳಾಗಿರಬೇಕು. ಅಂತಹವರಿಗೆ ಸರಿಯಾದ ಪಾಠ ಕಲಿಸಬೇಕು. ಅತಿಥಿ ಮನೆಯ ಮಾಲೀಕನಾಗಲು ಹೊರಟರೆ ತಕ್ಕ ಪಾಠ ಕಲಿಸಲು ಗೊತ್ತು.
ಹಿಂದೂಗಳನ್ನು ಅವಹೇಳನ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ದೇಶದಲ್ಲಿ ಭವ್ಯ ಮಂದಿರಗಳು ನಿರ್ಮಾಣಗೊಳ್ಳುತ್ತಿವೆ. ಪ್ರಭು ರಾಮಚಂದ್ರನ ದೇಗುಲ ನಿರ್ಮಾಣಗೊಳ್ಳುತ್ತಿದೆ. ಕಾಶಿಯಲ್ಲೂ ಮಹಾದೇವನ ದೇಗುಲವಿದೆ. ಕೋರ್ಟ್ನಲ್ಲೂ ನ್ಯಾಯ ಸಿಗುತ್ತಿದೆ ಅಂದ್ರೆ ಅಚ್ಛೇ ದಿನ ಬಂದಿದೆ ಅಂತ. ಹೀಗಾಗಿ ವಿರೋಧಿಗಳು ತಳಮಳಗೊಂಡಿದ್ದಾರೆ. ಭಾರತ ವಿಶ್ವಗುರುವಾಗುವ ಕಾಲ ಸನ್ನಿಹಿತವಾಗಿದೆ ಎಂದರು.
ಇದನ್ನೂ ಓದಿ: ಜಗತ್ತಿನ ಶ್ರೇಷ್ಠ ಋಷಿ ಪರಂಪರೆಯ ಪ್ರತಿನಿಧಿಗಳು ಹಿಂದೂಗಳು: ರಘುನಂದನ್
ಗಂಗೆಗೆ ಬಿದ್ದು ಸಾಯಬೇಕು: ಜಿನ್ನಾ ಮೇಲಿನ ಭಯದಿಂದ ಸಮಗ್ರ ಪಂಜಾಬ್ ಅನ್ನು ವಿಭಾಗಿಸಿ ಪಾಕಿಸ್ತಾನ ಮಾಡಿದರು. ಈಗ ಅವರೇ ಭಾರತ್ ಜೋಡೋ ಮಾಡುತ್ತಿದ್ದಾರೆ. ಆ ಪಾಪ ಪರಿಹಾರವಾಗಬೇಕೆಂದರೆ ಗಂಗೆಗೆ ಬಿದ್ದು ಸಾಯಬೇಕು ಎಂದು ನಂತರ ಮಾತನಾಡಿದ ಹಿಂಜಾವೇ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಆಕ್ರೋಶ ವ್ಯಕ್ತಪಡಿಸಿದರು.
ಅದ್ಧೂರಿ ಶೋಭಾಯಾತ್ರೆ ಮೆರವಣಿಗೆ: ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಮೂರನೇ ತ್ರೈಮಾಸಿಕ ಸಮ್ಮೇಳನದ ಸಾರ್ವಜನಿಕ ಮಹಾಸಭೆಗೂ ಮುನ್ನ ನಗರದಲ್ಲಿ ಅದ್ಧೂರಿಯಾಗಿ ಶಾಂತಿ ರೀತಿಯಲ್ಲಿ ಶೋಭಾಯಾತ್ರೆ ಮೆರವಣಿಗೆ ನಡೆಸಲಾಯಿತು. ಎನ್ಇಎಸ್ ಮೈದಾನದಿಂದ ಭುವನೇಶ್ವರಿ ತಾಯಿ ಭಾವಚಿತ್ರದೊಂದಿಗೆ ಪ್ರಾರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಾನುವಾರ ಹಿಂದು ಜಾಗರಣ ವೇದಿಕೆ ಪ್ರಾಂತ ಸಮ್ಮೇಳನ: ಸಾದ್ವಿ ಪ್ರಜ್ಞಾ ಸಿಂಗ್ ಭಾಗಿ