ಶಿವಮೊಗ್ಗ: ಮಲೆನಾಡು ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ವಿಪರೀತ ಮಳೆಯಾದ ಹಿನ್ನಲೆ ಭಾರಿ ವಾಹನಗಳು ಸಂಚರಿಸಿದರೆ ಘಾಟಿ ಕುಸಿಯುವ ಭೀತಿಯಿದೆ. ಆದ್ದರಿಂದ 12 ಟನ್ ಗಿಂತ ಹೆಚ್ಚು ಭಾರ ಹೊತ್ತ ವಾಹನಗಳು ಸಂಚಾರ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದರಿಂದ ದೊಡ್ಡ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ಬೀಳಲಿದೆ.
ಆಗುಂಬೆ ಘಾಟಿಯ ರಾಷ್ಟ್ರೀಯ ಹೆದ್ದಾರಿ169 A ಕರಾವಳಿಯಿಂದ ಸೊಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಲ್ಲಿ ಭಾರಿ ವಾಹನಗಳ ಸಂಚಾರ ಇದ್ದೇ ಇರುತ್ತದೆ. ಆದರೆ, ಆಗುಂಬೆ ಘಾಟಿಯು ಅತ್ಯಂತ ಸಣ್ಣ ಘಾಟಿ ಆಗಿರುವುದರಿಂದ, ಇಲ್ಲಿ ಭೂ ಕುಸಿತ ಉಂಟಾದರೆ ಕಾಮಗಾರಿ ನಡೆಸುವುದು ಕಷ್ಟಕರವಾಗಲಿದೆ. ಆದ್ದರಿಂದ ಮಳೆಗಾಲ ಮುಗಿಯುವ ತನಕ ಭಾರಿ ವಾಹನಗಳಿಗೆ ತಡೆ ನೀಡಲಾಗಿದೆ.
ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳಿಗೆ ತಡೆ ನೀಡಿರುವ ಕಾರಣ ಹೊಸನಗರದ ಹುಲಿಕಲ್ ಘಾಟಿ ರಸ್ತೆಯನ್ನು ಸಂಚಾರಕ್ಕೆ ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಕೆ ಬಿ ಆದೇಶ ನೀಡಿದ್ದಾರೆ.