ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಇಂದು ಭಾರಿ ಮಳೆ(Heavy rain)ಯಾಗಿದೆ. ವೀಕೆಂಡ್ ಮೂಡ್ನಲ್ಲಿದ್ದವರು ಮಳೆ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ.
ನಗರದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಶುರುವಾಗಿದೆ. ಬಿಡುವು ಕೊಡದೆ ಸುರಿಯುತ್ತಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಗಳಲ್ಲೂ ನೀರು ತುಂಬಿದೆ.
ಭಾರೀ ಮಳೆಯಿಂದಾಗಿ ಶಿವಮೊಗ್ಗದಲ್ಲಿ ಜನ ಮತ್ತು ವಾಹನ ಸಂಚಾರ ಕಷ್ಟಕರವಾಗಿದೆ. ಭಾನುವಾರದ ವ್ಯಾಪಾರಕ್ಕಾಗಿ ಸಿದ್ಧವಾಗಿದ್ದ ಚಾಟ್ಸ್, ತಿಂಡಿ, ತಿನಿಸು ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಲಷ್ಕರ್ ಮೊಹಲ್ಲಾದಲ್ಲಿ ಚರಂಡಿಗಳು ಭರ್ತಿಯಾಗಿವೆ. ರಸ್ತೆ ಮೇಲೆ ನೀರು ಹರಿಯುತ್ತಿದೆ. ಇಲ್ಲಿನ ಮನೆಗಳು, ಮಳಿಗೆಗಳ ಒಳಗೆ ನುಗ್ಗಿರುವ ನೀರನ್ನು ಹೊರಗೆ ಹಾಕಲು ಜನರು ಹರಸಾಹಸ ಪಟ್ಟಿದ್ದಾರೆ.
ರೈತರಲ್ಲಿ ಆತಂಕ ಮೂಡಿಸಿದ ಮಳೆ : ಭಾರೀ ಮಳೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆದು ನಿಂತ ಫಸಲನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಜೋಳ, ಭತ್ತ, ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ. ಅಡಿಕೆ ಕೊಯ್ಲು ಮುಗಿಸಿದ ಬೆಳೆಗಾರರು ಬೆಳೆ ಒಣಗಿಸಲು ಹರಸಾಹಸ ಪಡಬೇಕಾಗಿದೆ.
ಇತ್ತ ಬೆಳೆದು ನಿಂತ ಜೋಳ ಕಟಾವು ಮಾಡದೆ ರೈತರು ತೊಂದರೆಗೆ ಸಿಲುಕಿದ್ದಾರೆ. ಭತ್ತ ಬೆಳೆಗಾರರು ಕೂಡ ಈ ಮಳೆಯಿಂದಾಗಿ ಬೆಳೆ ಕೈತಪ್ಪುವ ಆತಂಕದಲ್ಲಿದ್ದಾರೆ.
ಓದಿ: ಚಾಮರಾಜನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಇನ್ನೆರೆಡು ದಿನ Yellow Alert