ಶಿವಮೊಗ್ಗ: ದಿನೇ ದಿನೆ ಶಬ್ದ ಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಿದ್ದು, ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ. ಮನುಷ್ಯ ಶಾಂತಿಯಿಂದ ಜೀವನ ನಡೆಸಬೇಕಾದ್ರೆ ಶಬ್ದ ಮಾಲಿನ್ಯದಿಂದ ದೂರ ಉಳಿಯಲೇಬೇಕು. ಇಲ್ಲವಾದರೆ ಮಾನವನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ.
ಮಾನವನ ಶಬ್ದ ಗ್ರಹಣ ಸಾರ್ಮಥ್ಯ ಎಷ್ಟು:
ಪ್ರತಿಯೊಬ್ಬ ವ್ಯಕ್ತಿ 60ರಿಂದ 80 ಡೆಸಿಬಲ್ ಶಬ್ದ ಗ್ರಹಣ ಸಾರ್ಮಥ್ಯವನ್ನು ಹೊಂದಿರುತ್ತಾನೆ. ಇದಕ್ಕಿಂತ ಹೆಚ್ಚಿನ ಡೆಸಿಬಲ್ ಶಬ್ದ ಬಂದ್ರೆ ಕಿವಿ ಕೇಳಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಕಿವಿಯಲ್ಲಿನ ತಮಟೆಯು ಒಡೆದು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಹತ್ತಿರ ಹಾಗೂ ದೂರುದ ಶಬ್ದಗಳು ಕೇಳದಂತಾಗಿ ಕೊನೆಗೆ ಕಿವಿಯೇ ಕೇಳದಂತಾಗುತ್ತದೆ. ನಂತರ ವಿವಿಧ ರೋಗಗಳು ಪ್ರಾರಂಭವಾಗುತ್ತವೆ.
ಶಬ್ದ ಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳು:
ಹೆಚ್ಚಿನ ಶಬ್ದ ಮಾಲಿನ್ಯದಿಂದ ಮೊದಲು ಕಿವಿ ಕೇಳಿಸದಂತಾಗುತ್ತದೆ. ಇದರಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ. ನಂತರ ಅಸಮಾಧಾನ ಪ್ರಾರಂಭವಾಗುತ್ತದೆ. ಜೊತೆಗೆ ಬಿಪಿ, ಹಾರ್ಮೋನ್ನಲ್ಲಿ ಬದಲಾವಣೆ ಆಗುತ್ತದೆ. ಕಿವಿಯ ತೂಂದರೆ ಉಂಟಾಗುತ್ತಿದ್ದಂತೆಯೇ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ಕಾರ್ಖಾನೆಗಳಿಂದ ಹೆಚ್ಚು ಶಬ್ದ ಮಾಲಿನ್ಯ:
ಕಾರ್ಖಾನೆಗಳಿಂದ ಶಬ್ದ ಮಾಲಿನ್ಯ ವಿಪರೀತವಾಗಿರುತ್ತದೆ. ಇದನ್ನು ತಡೆಯಲು ಕಾರ್ಖಾನೆಗಳಿಗೆ ಏರ್ ಪ್ಲಗ್ ಎಂಬ ವಸ್ತುವನ್ನು ಅಳವಡಿಸುತ್ತಾರೆ. ಇದು ಸಿಲಿಕಾನ್ನಿಂದ ತಯಾರಾಗಿರುವುದರಿಂದ ಹೆಚ್ಚಿನ ಶಬ್ದವನ್ನು ಹೊರ ಹೋಗದಂತೆ ನೋಡಿಕೊಳ್ಳುತ್ತದೆ. ಶಬ್ದ ಮಾಲಿನ್ಯ ಉಂಟು ಮಾಡುವ ಕಾರ್ಖಾನೆಗಳಿಗೆ ನಗರ ಪ್ರದೇಶದಲ್ಲಿ ಅನುಮತಿ ನೀಡುವುದಿಲ್ಲ. ಹೆಚ್ಚಾಗಿ ಕಾರ್ಖಾನೆಗಳನ್ನು ಜನ ವಸತಿ ಪ್ರದೇಶದಿಂದ ದೂರವೇ ನಿರ್ಮಾಣ ಮಾಡಲಾಗಿರುತ್ತದೆ.
ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯವನ್ನು ತಡೆಯಲು ಪೊಲೀಸ್ ಇಲಾಖೆಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ದಂಡ ಹಾಕುವುದರೊಂದಿಗೆ ಪ್ರಕರಣ ದಾಖಲಿಸಿಕೊಂಡು ಜನರಿಗೆ ಬಿಸಿ ಮುಟ್ಟಿಸಲಾಗುತ್ತಿದೆ. ಒಟ್ಟಾರೆ ಶಬ್ದ ಮಾಲಿನ್ಯ ಕಡಿಮೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ನಿಷ್ಕ್ರಿಯವಾಗಿರುವ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ:
ಜಿಲ್ಲೆಯಲ್ಲಿ ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸದ್ಯದ ಮಟ್ಟಿಗೆ ನಿಷ್ಕ್ರಿಯವಾಗಿದೆ. ಕಾರಣ ಇವರು ವಾಯು ಮಾಲಿನ್ಯ ಸಪ್ತಾಹ ದೀಪಾವಳಿ ಹಬ್ಬದಲ್ಲಿ ಬಿಟ್ಟರೆ ಬೇರೆ ಸಂದರ್ಭದಲ್ಲಿ ನಡೆಸುವುದೇ ಇಲ್ಲ. ಈ ಮಂಡಳಿಯವರು ಕೇವಲ ಕಾರ್ಖಾನೆ, ಹೋಟೆಲ್, ಉದ್ಯಮಗಳಿಗೆ ಅನುಮತಿ ನೀಡುವುದು, ಅನುಮತಿ ಪುನರ್ ನವೀಕರಿಸುವುದನ್ನು ಮಾಡುತ್ತಾರೆ ಬಿಟ್ಟರೆ ಬೇರೆ ಕೆಲಸವನ್ನೇ ಮಾಡುತ್ತಿಲ್ಲ ಎನ್ನುವ ಆರೋಪವಿದೆ.
ಈ ಸುದ್ದಿಯನ್ನೂ ಓದಿ: ಬೆಂಗಳೂರಿನ ಶಬ್ದ ಮಾಲಿನ್ಯ ಗಣನೀಯ ಏರಿಕೆ; ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ!
ಕೋಣಂದೂರಿನ ಆರ್ಯವೇದಿಕ್ ಕಟ್ಟಡ, ತಾಳಗುಪ್ಪದ ಕಾರ್ಪೆಂಟರಿ ವರ್ಕ್ಸ್, ಸಾಗರದ ಅಡಿಕೆ ಸುಲಿಯುವ ಯಂತ್ರದ ಕಟ್ಟಡದ ತೆರವು ಹಾಗೂ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿನ ಬೆಡ್ ತಯಾರಿಕಾ ಘಟಕ ಹೀಗೆ ನಾಲ್ಕೈದು ಪ್ರಕರಣಗಳನ್ನು ದಾಖಲಿಸಿ ಸುಮ್ಮನಾಗುತ್ತಿದೆ. ಇವರು ಕೇವಲ ಕಚೇರಿ ಕೆಲಸವನ್ನಷ್ಟೇ ಮಾಡುತ್ತಿದ್ದು, ಫಿಲ್ಡ್ ವರ್ಕ್ ಇಲ್ಲದಂತಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.