ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಗೆ ಕಾಯಕಲ್ಪ ನೀಡಲಾಗುತ್ತಿದೆ. ಇದರಿಂದ ಇಲ್ಲಿ ಹೃದ್ರೋಗ ಮತ್ತು ನರರೋಗ ವಿಭಾಗ ಒಂದು ವಾರದ ಒಳಗಾಗಿ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೂಪರ್ ಸ್ಪೆಷಾಲಿಟಿ ವಿಭಾಗ ಪ್ರಾರಂಭವಾಗಿ 10 ವರ್ಷಗಳಾದರೂ ಇದುವರೆಗೆ ಪ್ರಾರಂಭವಾಗಿಲ್ಲ. ಇದೀಗ ಮೆಗ್ಗಾನ್ ಆಸ್ಪತ್ರೆಯ 3 ಜನ ಹೃದ್ರೋಗ ತಜ್ಞರು ಮತ್ತು ಒಬ್ಬ ನರರೋಗ ತಜ್ಞರ ಸೇವೆಯನ್ನು ಪಡೆದುಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಮತ್ತು ನರರೋಗ ವಿಭಾಗದ ಒಪಿಡಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವಿಭಾಗಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಹುಟ್ಟಿನಿಂದಲೇ ಕಿವುಡುತನ ಇರುವ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲು ಮತ್ತು ವಾಕ್‍ಶ್ರವಣ ಕೇಂದ್ರದಲ್ಲಿ ಬಿಎಸ್ಸಿ (ಸ್ಪೀಚ್ ಆ್ಯಂಡ್ ಹಿಯರಿಂಗ್) ತರಗತಿಗಳನ್ನು ಆರಂಭಿಸಲು 4.84 ಕೋಟಿ ರೂ. ಬಿಡುಗಡೆಯಾಗಿದ್ದು, ಒಂದು ವಾರದೊಳಗೆ ಇದರ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸಲಾಗಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ಕೋರ್ಸ್ ಶುರುವಾಗಲಿದೆ ಎಂದರು.
ನರ್ಸ್, ಟೆಕ್ನಿಷಿಯನ್ ಮತ್ತಿತರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಪ್ರಕ್ರಿಯೆ ತಕ್ಷಣ ಆರಂಭಿಸಲು ಸೂಚಿಸಲಾಗಿದೆ. ಎಮರ್ಜೆನ್ಸಿ ಮೆಡಿಸಿನ್ ಮತ್ತು ಜಿರಿಯಾಟ್ರಿಕ್ ವಿಭಾಗವನ್ನು ಪ್ರಾರಂಭಿಸಲು ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.