ಶಿವಮೊಗ್ಗ: ಮಾಜಿ ಸಿಎಂ ಕುಮಾರಸ್ವಾಮಿ ಅವರು ವದಂತಿ ಹಬ್ಬಿಸುವುದರಲ್ಲಿ ನಿಸ್ಸೀಮರು ಹಾಗೂ ಸುಳ್ಳು ಹೇಳುವುದರಲ್ಲಿ ನಂಬರ್ ಒನ್ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪಾಟೀಲ್, ಕುಮಾರಸ್ವಾಮಿರವರು ತಮ್ಮ ಟ್ವೀಟ್ನಲ್ಲಿ ಸಾಲ ಮನ್ನಾದ ವಿಚಾರದಲ್ಲಿ ರೈತರಲ್ಲಿ ಗೊಂದಲವನ್ನುಂಟು ಮಾಡುತ್ತಾ ಇದ್ದಾರೆ. ಹೆಚ್ಡಿಕೆ ಮಾತಿಗೂ ಹಾಗೂ ಅವರ ಕೃತಿಗೂ ಅಜಾಗಂಜಾತರ ಇರುತ್ತದೆ, ಅವರ ಮಾತಿಗೆ ಯಾರೂ ಬೆಲೆ ಕೊಡಬೇಕಾದ ಅಗತ್ಯ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈಗಾಗಲೇ ಸಿಎಂ ಯಡಿಯೂರಪ್ಪ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ. ಕುಮಾರಸ್ವಾಮಿ ಅವರ ಸಾಲಮನ್ನಾ ಯೋಜನೆ ಎಷ್ಟು ರೈತರಿಗೆ ತಲುಪಿದೆ ಎಂದು ಯಾರಿಗೂ ಸಹ ತಿಳಿದಿಲ್ಲ. ಶಾಸನ ಸಭೆಯಲ್ಲಿ ಅವರು ಏನೂ ಓದಿದ್ದರು ಎಂಬುದು ನನಗೆ ತಿಳಿಯಲಿಲ್ಲ, ಇನ್ನು ಜನ ಸಾಮಾನ್ಯರಿಗೆ ಸಾಲ ಮನ್ನಾದ ಬಗ್ಗೆ ಏನೂ ತಿಳಿಯಲಿದೆ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ಯತ್ನಾಳ್-ದೊರೆಸ್ವಾಮಿ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದ ಕೌರವ: ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳ್ತಾ ಇದ್ದೀರಿ, ದೊರೆಸ್ವಾಮಿರವರು ಏನ್ ಹೇಳಿದ್ರು ಅಂತ ಕೇಳುತ್ತಿಲ್ಲ. ಆ್ಯಕ್ಷನ್ ಇಲ್ಲದೇ ರಿಯಾಕ್ಷನ್ ಬರುವುದಿಲ್ಲ, ಬೆಂಕಿ ಇಲ್ಲದೇ ಹೊಗೆ ಆಡಲ್ಲ. ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಪಾಟೀಲ್ ಪ್ರತಿಕ್ರಿ ಯಿಸಿದ್ದಾರೆ.
ಚಿತ್ರದುರ್ಗದಲ್ಲಿನ ನನ್ನ ಹೇಳಿಕೆಗೆ ನಾನು ಈಗಲೂ ಬದ್ದನಾಗಿದ್ದೇನೆ. ಭಾರತ ದೇಶದಲ್ಲಿ ಇದ್ದು ಪಾಕಿಸ್ತಾನಕ್ಕೆ ಜೈ ಅನ್ನುವವರು ದೇಶದ್ರೋಗಿಗಳಲ್ಲದೇ ಮತ್ತಿನ್ನೇನು ಎಂದು ಪ್ರಶ್ನೆ ಮಾಡಿದರು. ಇಂತಹವರಿಗೆ ದೇಶಪ್ರೇಮಿಗಳು ಎಂದು ಹಣೆಪಟ್ಟಿ ಕಟ್ಟುವುದಕ್ಕೆ ಆಗುತ್ತದೆಯೇ?. ಇವರಿಗೆ ಭಾರತ ದೇಶದ ಅನ್ನ ಬೇಕು, ಭಾರತದ ಗಾಳಿ ಬೇಕು, ಇಲ್ಲಿ ತಿಂದು ಪಾಕಿಸ್ತಾನಕ್ಕೆ ಜೈ ಅನ್ನುವವರ ದೇಶದ್ರೋಹಿಗಳು. ಅದೇ ಪಾಕಿಸ್ತಾನದಲ್ಲಿ ಭಾರತ ಮಾತಾಕೀ ಜೈ ಅಂದ್ರೆ 5 ನಿಮಿಷದಲ್ಲಿ ಕತ್ತು ಕುಯ್ದು ಹಾಕುತ್ತಾರೆ ಎಂದು ಪಾಟೀಲ್ ಕಿಡಿ ಕಾರಿದರು.