ಶಿವಮೊಗ್ಗ: ನಗರದ ಹೊರವಲಯದ ಹರಕೆರೆಯ ಜಗದೀಶ್ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಕುಮಾರಸ್ವಾಮಿ ನಿನ್ನೆ ಸಂಜೆ ಬೈಂದೂರು ಮೂಲಕ ಹಾಸನಕ್ಕೆ ತೆರಳಿದರು. ಇದಕ್ಕೂ ಮುನ್ನ ಮನೆಯಿಂದ ಹೊರ ಬರುತ್ತಲೇ ಮಾಧ್ಯಮದವರನ್ನು ಕಂಡು ಏನೂ ಪ್ರತಿಕ್ರಿಯಿಸದೇ ತಮ್ಮ ಕಾರು ಹತ್ತಿ ಸಾಗಿದರು.
ಮೊನ್ನೆ ಸಂಜೆ ಜಿಲ್ಲೆಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು, ಅಂದು ರಾತ್ರಿಯಿಡೀ ಜಗದೀಶ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಸಭೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ, ಕುಮಾರಸ್ವಾಮಿ ಬೆಳಗ್ಗೆಯಿಂದ ಸಂಜೆವರೆಗೂ ಮನೆಯಿಂದ ಹೊರ ಬಾರದೇ ಅಲ್ಲಿಯೇ ಕುಳಿತು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಜಿಲ್ಲೆಯಲ್ಲಿ ಹೇಗೆ ಕಟ್ಟಿ ಹಾಕುವುದು ಎಂಬುದರ ಬಗ್ಗೆ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು ಎನ್ನಲಾಗ್ತಿದೆ.