ಶಿವಮೊಗ್ಗ/ಹಾಸನ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಕಾರ್ಮಿಕರ ಉಳಿವಿಗಾಗಿ ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಶಿವಮೊಗ್ಗ ಜಿಲ್ಲೆ ಭದ್ರಾವತಿ ಪಟ್ಟಣದ ವಿಐಎಸ್ಎಲ್ ಕಾರ್ಖಾನೆಯ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಲು ಆಗಮಿಸಿದ ಹೆಚ್ಡಿಕೆ ಕಾರ್ಮಿಕರನ್ನು ಉದ್ದೇಶಿ ಮಾತನಾಡಿದರು.
ಬಿಎಸ್ವೈ ವಿರುದ್ಧ ವಾಗ್ದಾಳಿ: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ ರಾಘವೇಂದ್ರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಯಾವ ಪುರುಷಾರ್ಥಕ್ಕೆ ವಿಮಾನ ನಿಲ್ದಾಣ ಕಟ್ಟಿದ್ದೀರಿ? ಎಂದು ಕಿಡಿ ಕಾರಿದರು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. ಇಷ್ಟೊಂದು ಜನ ಬೀದಿ ಪಾಲಾಗುತ್ತಿದ್ದಾರೆ. ನಾನು ಜೆಡಿಎಸ್ಗೆ ಬರುತ್ತೇನೆ ಎಂದು ಬಂದ ಬಿಎಸ್ವೈ ಎಲ್ಲಾ ಮರೆತಿದ್ದಾರೆ. ಇದೆಲ್ಲಾ ಏನ್ ಕಥೆ ಕಟ್ಟಿದಲ್ಲ. ಅಂದು ನಾನು ಬಿಜೆಪಿ ಜತೆ ಸರ್ಕಾರ ಮಾಡದೆ ಹೋಗಿದ್ರೆ, ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಇದರಿಂದ ನೀವು ನಿಮ್ಮ ಮಕ್ಕಳು ಆನಂದವಾಗಿದ್ದಿರಿ ಎಂದರು.
ಇದೇನಾ ಡಬಲ್ ಇಂಜಿನ್ ಸರ್ಕಾರ?: ಅರಸರು ದೂರದೃಷ್ಟಿಯಿಂದ ನಿರ್ಮಿಸಿದ ಕಾರ್ಖಾನೆಯನ್ನು ಖಾಸಗಿ ಮಾಡಲು ಹೊರಟಿದ್ದೀರಿ. ನಿಮಗೆ ಧೈರ್ಯ ಇದ್ರೆ ಮೋದಿ ಬಳಿ ಹೋಗಿ, ನಮ್ಮ ರಾಜ್ಯದ ಜನರ ಕುಟುಂಬವನ್ನು ಬೀದಿ ಪಾಲು ಮಾಡಲು ಪಕ್ಷವನ್ನು ಕಟ್ಟಿಲ್ಲ ಎಂದು ಹೇಳಿ. ನೀವು ಸಿಎಂ ಆಗಿ ಬೆಳೆದಿರಿ. ಆದರೆ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಹೊರಟಿದ್ದಿರಿ. ಇದೇನಾ ಡಬಲ್ ಇಂಜಿನ್ ಸರ್ಕಾರ ಎಂದು ಪ್ರಶ್ನಿಸಿದರು.
ಕಾರ್ಖಾನೆ ಉಳಿಸಿಕೊಡುತ್ತೇನೆ: ನಾಲ್ಕು ತಿಂಗಳು ಕಾಲ ಕಾರ್ಖಾನೆಯನ್ನು ಪರಭಾರೆ ಮಾಡದಂತೆ ನೋಡಿಕೊಳ್ಳಿ. ನಾವು ಏಕಾಂಗಿಯಾಗಿ ಹೋರಾಟ ಮಾಡುತ್ತಾ ಓಡಾಡುತ್ತಿದ್ದೇವೆ. ಜೂನ್ನಲ್ಲಿ ಸರ್ಕಾರ ತರುವ ಗುರಿ ಇಟ್ಟುಕೊಂಡು ಹೊರಟಿದ್ದೇವೆ. ಜಿಲ್ಲೆಯ ಜನರಿಂದ ಬದುಕಿದ್ದೇವೆ ಎಂದು ನಿಮ್ಮ ಹೃದಯದಲ್ಲಿ ಇದ್ದರೆ, ಅವರ ಋಣ ತೀರಿಸಿ. ಜೀವನ ಯಾರಿಗೂ ಶಾಶ್ವತವಲ್ಲ. ನಾವು ನಿಮ್ಮ ಜತೆ ಸರ್ಕಾರ ಮಾಡದೆ ಹೋಗಿದ್ರೆ, ನೀವು ಯಾವುದೇ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಮೊದಲು ಜನರ ಬದುಕು ಮುಖ್ಯ ಅಧಿಕಾರವಲ್ಲ. ಜಿಲ್ಲೆಯ ಜನತೆಗಾಗಿ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ಗಟ್ಟಿಯಾಗಿ ಮಾತನಾಡಬೇಕಿದೆ ಎಂದರು.
ಎಂಪಿಎಂ ಹಾಗೂ ವಿಐಎಸ್ಎಲ್ ಕಾರ್ಖಾನೆಯನ್ನು ನಿಮ್ಮ ತೆರಿಗೆ ಹಣದಿಂದ ಉಳಿಸುವ ತಾಕತ್ ಇದೆ. ಕಾರ್ಖಾನೆ ಪುನಶ್ಚೇತನಕ್ಕೆ ಸಾವಿರ ಕೋಟಿ ಹಾಕಲು ತಯಾರು ಇವೆ. ಸಾರ್ವಜನಿಕ ಉದ್ಯಮಿಗಳನ್ನು ಮುಚ್ಚಿ ಹಾಕಲಾಗಿದೆ. ದೇವೆಗೌಡರು ಈ ಕುರಿತು ಪತ್ರ ಬರೆದಿದ್ದಾರೆ. ಅವರ ಗರಡಿಯಲ್ಲಿ ಪಳಗಿದ ಅವರ ಮಕ್ಕಳು ಹೋರಾಟ ಮಾಡುತ್ತಿದ್ದಾರೆ. ಮುಂದಿನ ಸಿಎಂ ಎಂದು ಜನ ಹೇಳ್ತಾ ಇದ್ದಾರೆ. ಮುಂದೆ ಚುನಾವಣಾ ನೀತಿ ಸಂಹಿತೆ ಬರುವುದರಿಂದ ಕಾರ್ಖಾನೆ ಏನೂ ಮಾಡಲು ಆಗಲ್ಲ. ಬಿಜೆಪಿ ಭದ್ರಾವತಿಯಲ್ಲಿ ಅಲ್ಲ ರಾಜ್ಯದಲ್ಲಿಯೇ ಇಲ್ಲ. ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ನಾನು ಕಾರ್ಖಾನೆ ಉಳಿಸಿ ಕೊಡುತ್ತೇನೆ ಎಂದು ಹೆಚ್ಡಿಕೆ ಭರವಸೆ ನೀಡಿದರು.
ಕಾರ್ಖಾನೆ ಉಳಿಸಿ ಎಂದು ಕೇಳೋಣ: ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟನೆಗೆ ಫೆಬ್ರವರಿ 27ಕ್ಕೆ ಬರುತ್ತಾರೆ. ನೀವು 10-15 ಸಾವಿರ ಜನ ರೆಡಿ ಆಗಿ. ನಾನೇ ಬರುತ್ತೇನೆ. ಕಾರ್ಖಾನೆ ಮುಚ್ಚಿಸಬೇಡಿ, ಉಳಿಸಿ ಎಂದು ಕೇಳೋಣ. ಚುನಾವಣೆ ಮುಂದೆ ಇಟ್ಟುಕೊಂಡು ಚುನಾವಣೆ ಭಾಷಣಕ್ಕೆ ಬಂದಿಲ್ಲ. ಸ್ಥಳೀಯ ಶಾಸಕರು ತಂಪಾಗಿದ್ದಾರೆ. ಅವರಿಗೆ ನಿಮ್ಮ ಕಷ್ಟ ಅವರಿಗೆ ಅರಿವು ಆಗಲ್ಲ. ಒಡೆಯರು, ವಿಶ್ವೇಶ್ವರಯ್ಯ ಹೆಸರು ಉಳಿಸುವ ಕೆಲಸ ಮಾಡುತ್ತೇವೆ ಎಂದರು.
ಒಂದು ಕಬ್ಬಿಣ ಸಹ ಬಿಟ್ಟಿಲ್ಲ: ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, "ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದವರನ್ನು ಏಕ ವಚನದಲ್ಲಿ ಹಿಯ್ಯಾಳಿಸಿದರು. ಸೆಲ್ನವರು ಕಾರ್ಖಾನೆಯ ಎಲ್ಲಾ ಕಬ್ಬಿಣವನ್ನು ಮಾರಿ ಹೋದರು. ರಾಷ್ಟ್ರೀಯ ಪಾರ್ಟಿ ಇದ್ರೆ ಬೆಳೆಯಲು ಬಿಡಲ್ಲ. ಪ್ರಾದೇಶಿಕ ಪಕ್ಷವನ್ನು ಬೆಳೆಸಬೇಕಿದೆ. ಕುಮಾರಣ್ಣ ಅಧಿಕಾರಕ್ಕೆ ಬಂದ್ರೆ ಕಾರ್ಖಾನೆ ಉಳಿಸುತ್ತಾರೆ. ಕಾರ್ಖಾನೆಯಲ್ಲಿ ನಾನು ಕೆಲಸ ಮಾಡಿದ್ದೇವೆ. ಕಾರ್ಖಾನೆ ಉಳಿಸುತ್ತೇವೆ. ಮೂರು ತಿಂಗಳು ಕಾಯಿರಿ. ಅಪ್ಪನ ಮಗ ಸಿಎಂ ಆಗುತ್ತಾರೆ. ಕಾರ್ಖಾನೆ ಉಳಿಸುತ್ತಾರೆ. ದರಿದ್ರ ಸೆಲ್ ನವರು ಕಾರ್ಖಾನೆ ತೆಗೆದುಕೊಂಡು ಈಗ ಸ್ಮಶಾನ ಮಾಡಿದ್ದಾರೆ. ನಾವು ಇದನ್ನು ಕೈಲಾಸ ಮಾಡುತ್ತೇವೆ". ರಾಜ್ಯದಲ್ಲಿ ಕುಮಾರಣ್ಣ ಇದ್ದಾರೆ, ಕಾರ್ಖಾನೆ ಮುಚ್ಚಲು ಬಿಡಲ್ಲ. ನಿಮಗೆ ಆಗದಿದ್ರೆ ನಮಗೆ ಕೊಡಿ. ನೀವು ಕೊಟ್ಟ ಒಂದು ರೂಪಾಯಿ ವಾಪಸ್ ಕೊಡ್ತೀವಿ. ದೇವೇಗೌಡರು ಬರೆದ ಪತ್ರಕ್ಕೆ ಏನು ಉತ್ತರ ಬರುತ್ತೆ ಕಾಯೋಣ ಎಂದರು.
ದೆಹಲಿಗೆ ಹೋಗಿ ಕಾಲು ಹಿಡಿಯುವುದನ್ನು ಬಿಡಿ, ನಾವು ಕೆಂಪೇಗೌಡ ಅವರ ನಾಡಿನವರು. ಕಾರ್ಖಾನೆ ನೀಡುವಾಗ ನಿಮ್ಮಪ್ಪ ನಮ್ಮ ಜೊತೆ ಇದ್ರು. ನಿಮ್ಮಪ್ಪನ ಮಾನ ಉಳಿಸಲು ಮಧ್ಯ ಪ್ರವೇಶ ಮಾಡಿ ಎಂದು ಸಿಎಂ ಬಸವರಾಜ ಜೊಮ್ಮಾಯಿ ಅವರಿಗೆ ಇಬ್ರಾಹಿಂ ಆಗ್ರಹಿಸಿದರು. ಇನ್ನು, ಯಡಿಯೂರಪ್ಪ ತ್ರಿಫ್ಯೂಸ್ ಅಂತಾರೆ. ಆದರೆ ಅವರಿಗೆ ಎರಡೇ ಫ್ಯೂಸ್ ಇರೋದು. ಒಂದು ಮೋದಿ ಕೈಯಲ್ಲಿ, ಇನ್ನೊಂದು ಅಮಿತ್ ಶಾ ಕೈಯಲ್ಲಿ ಎಂದು ಟೀಕಿಸಿದರು.
ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ: ಜೂನ್ ನಲ್ಲಿ ಹೆಚ್ .ಡಿ. ಕುಮಾರಸ್ವಾಮಿ ಸಿಎಂ ಆಗುತ್ತಾರೆ. ಜಾಗ ಮಾರಿದ್ರೆ ಸಾವಿರಾರು ಕೋಟಿ ರೂ.ಗೆ ಮಾರಾಟವಾಗುತ್ತಿದೆ. ಚರಿತ್ರೆ ಗೊತ್ತಿದೆ. ಎಂಪಿಎಂನಿಂದ ಕುಡಿಯುವ ನೀರು ಮಾಡಿದ್ರೆ ಪ್ರತಿ ದಿನ 300 ಕೋಟಿ ರೂ ಬರುತ್ತಿದೆ. ಕಾರ್ಖಾನೆಯ ಮರ ಅರಣ್ಯಾಧಿಕಾರಿಗಳು ತಿನ್ನುತ್ತಿದ್ದಾರೆ. ಸಿಡಿ ಹಿಡಿದುಕೊಂಡು ರಾಜಕೀಯ ಮಾಡ್ತಾ ಇದ್ದಾರೆ. ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಭಾರತ ಮಾತೆ ಅನ್ನುವ ಸಿ.ಟಿ ರವಿ ಕರೆಯಿಸಿ. ಮೊದಲು ಅಮ್ಮನನ್ನು ನೋಡು, ನಂತರ ಅಜ್ಜಿಯನ್ನು ನೋಡುವಂತೆ ಎಂದು ಹೇಳಿದರು.
ಅರಸೀಕೆರೆಯಲ್ಲಿ ಜೆಡಿಎಸ್ ಭದ್ರವಾಗಿದೆ: ಅರಸೀಕೆರೆ ಕ್ಷೇತ್ರದ ಸಾಕಷ್ಟು ಎಲೆಕ್ಷನ್ ನೋಡಿದ್ದೇನೆ. ಈಗ ಶಿವಲಿಂಗೇಗೌಡ ಅವರಿಗೆ ಹೊಟ್ಟೆ ತುಂಬಿದೆ. ಅವರು ನಮ್ಮಲ್ಲಿ ಇರ್ತಾರೊ ಬಿಡ್ತಾರೊ ಗೊತ್ತಿಲ್ಲ. ಆದರೆ ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಭದ್ರವಾಗಿದೆ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು.
ಶರಣರ ಸಂಘದಲ್ಲಿ ಬೆಳೆದವನು: ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುಳಿದವರು ಹಾಗೂ ದಲಿತರು ಎಲ್ಲರೂ ಒಟ್ಟಾಗಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ ಒಂದೊಂದು ಸಮಾಜದ ಲೀಡರ್. ಅದೇ ರೀತಿ ಮುಸ್ಲಿಂರಿಗೂ ಒಬ್ಬರು ಲೀಡರ್ ಇದ್ದಾರೆ. ಅದು ಸಿ ಎಂ ಇಬ್ರಾಹಿಂ ಸಾಹೇಬ್ರು. ನಾನು ಯಾವತ್ತೂ ಜಾತಿಯಿಂದ ಗುರುತಿಸಿಕೊಂಡಿಲ್ಲ. ಶರಣರ ಸಂಘದಲ್ಲಿ ಬೆಳೆದವನು ಎಂದರು.
ರೈತರ ಸರ್ಕಾರ ತರುವ ಸಂಕಲ್ಪ: 92 ವರ್ಷದ ದೇವೇಗೌಡರು ಜೀವಂತ ಇರುವಾಗ ವಿಧಾನಸೌಧದಲ್ಲಿ ರೈತರ ಸರ್ಕಾರ ತರಬೇಕು ಎನ್ನೋದು ನಮ್ಮ ಸಂಕಲ್ಪ. ನಮ್ಮ ಜೊತೆಗೆ ಇರೋರು ಯಾರು ಕರೆದುಕೊಂಡು ಬಂದ ಜನ ಅಲ್ಲ. ಸ್ವಯಂ ಪ್ರೇರಿತವಾಗಿ ಬಂದ ಜನ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ದೇವೇಗೌಡರ ಕುಟುಂಬ ಒಂದಾಗಿದೆ: ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರೇವಣ್ಣ ಅವರು ದೇವೇಗೌಡರು, ಕುಮಾರಸ್ವಾಮಿ ಹಾಗೂ ಇಬ್ರಾಹಿಂ ತೀರ್ಮಾನ ಅಂತಿಮ ಎಂದಿದ್ದಾರೆ. ಎಲ್ಲರು ಒಂದು ಬರೆದಿಟ್ಟುಕೊಳ್ಳಿ. ರೇವಣ್ಣ, ಕುಮಾರಣ್ಣ, ರಮೇಶಣ್ಣ ಹಾಗೂ ಬಾಲಣ್ಣ ಈ ನಾಲ್ಕು ಜನರು ಪ್ರಪಂಚ ಆ ಕಡೆ ಈ ಕಡೆ ಆದ್ರು ಬೇರೆ ಆಗಲ್ಲ. ಐವತ್ತು ವರ್ಷದಿಂದ ಅವರನ್ನು ನೋಡಿದ್ದೇನೆ. ಅವರಲ್ಲಿ ಭಿನ್ನಾಭಿಪ್ರಾಯ ಬರಲ್ಲ. ಯಾರಾದ್ರು ಹಾಗಂದುಕೊಂಡರೆ ಅದು ತಪ್ಪು ಕಲ್ಪನೆ. ದೇವೇಗೌಡರ ಕುಟುಂಬ ಒಂದಾಗಿದೆ. ಭವಾನಿ ಆಗಲಿ, ಸ್ವರೂಪ್ ಆಗಲಿ ಟಿಕೆಟ್ ಕೇಳೋದ್ರಲ್ಲಿ ತಪ್ಪಿಲ್ಲ. ಆದರೆ ಟಿಕೆಟ್ ಯಾರಿಗೆ ಎಂದು ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಕಟೀಲ್ ಒಬ್ಬ ವಿದೂಷಕ: ನಳೀನ್ ಕುಮಾರ್ ಕಟೀಲ್ ಒಬ್ಬ ವಿದೂಷಕ ಇದ್ದ ಹಾಗೆ. ಅವರ ಚರಿತ್ರೆ ಬಿಚ್ಚಿಬಿಟ್ರೆ ದೇಶ ಬಿಟ್ಟು ಹೋಗಬೇಕಾಗುತ್ತದೆ. ಒಂದು ಸಲ ಬಾಂಬೆಗೆ ಹೋಡಿ ಹೋಗಿದ್ರು. ಬಾಂಬೆಗೆ ಯಾಕ್ ಓಡಿ ಹೋಗಿದ್ರು ಅಂತಾ ಕೇಳಿ ? ಯಾರನ್ನೋ ಪಂಚರ್ ಮಾಡಿ ಬಾಂಬೆಗೆ ಓಡಿ ಹೋಗಿದ್ರು. ಅದೆನ್ನೆಲ್ಲಾ ಬಿಚ್ಚಿಬಿಟ್ರೆ ರಾಜ್ಯ ಬಿಟ್ಟು ಓಡಿ ಹೋಗಬೇಕಾಗುತ್ತದೆ ಎಂದು ಹೆಚ್ಡಿಕೆ ಟಾಂಗ್ ನೀಡಿದರು. ಅರಸೀಕೆರೆಯಲ್ಲಿ ಮಾತನಾಡಿದ ಅವರು, ಪಂಚರತ್ನ ಯಾತ್ರೆ ಪಂಚರ್ ಆಗುತ್ತದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರ ಪಂಚರ್ ರಿಪೇರಿ ಮಾಡಿಕೊಳ್ಳಲು ಹೇಳಿ. ನನ್ನ ಪಂಚರ್ ಆಮೇಲೆ ನೋಡೋಣ ಎಂದು ಟಾಂಗ್ ಕೊಟ್ಟರು.
ಸದ್ಯದಲ್ಲೇ 2ನೇ ಪಟ್ಟಿ ಬಿಡುಗಡೆ: ಫೆ.4ರಂದು ಹಾಸನ ಜಿಲ್ಲೆಯ 7 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಾಗೂ ಆ ಬಗ್ಗೆ ನನಗೆ ಗೊತ್ತಿಲ್ಲ ಎಂಬ ಹೆಚ್.ಡಿ ರೇವಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಅವತ್ತೇ ಪಟ್ಟಿ ಬಿಡುಗಡೆ ಮಾಡ್ತಿನಿ ಅಂತಾ ಎಲ್ಲಿ ಹೇಳಿದ್ದೇನೆ?, ಫೆ.3ನೇ ತಾರೀಖಿನ ನಂತರ ಚರ್ಚೆ ಮಾಡ್ತಿವಿ ಅಂತಾ ಹೇಳಿದ್ದೇನೆ. ರಾಜ್ಯದ ಜನತೆ ಹಾಗೂ ಪಕ್ಷದ ಕಾರ್ಯಕರ್ತರ ಭಾವೆನಗಳನ್ನು ಗಮನದಲ್ಲಿಟ್ಟುಕೊಂಡು ಅದರ ಮೇಲೆ ತೀರ್ಮಾನ ಮಾಡ್ತಿನಿ. ಸದ್ಯದಲ್ಲೇ ಸಭೆ ಕರೆದು, 2ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಇನ್ನು ರಮೇಶ್ ಜಾರಕಿಹೋಳಿ ಹಾಗೂ ಡಿಕೆಶಿ ನಡುವೆ ಸಿಡಿ ವಾರ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಸಂಬಂಧವಿಲ್ಲ. ಅದು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಂಬಂಧಿಸಿದ್ದು ಎಂದರು.
ಇದನ್ನೂ ಓದಿ: VISL ಕಾರ್ಖಾನೆ ಉಳಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ: ಬಿ.ವೈ ರಾಘವೇಂದ್ರ