ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ 10 ಜನರನ್ನು 11 ದಿನ ಪೊಲೀಸರ ಕಸ್ಟಡಿಗೆ ನೀಡಿ ಶಿವಮೊಗ್ಗದ ಎರಡನೇ ಜೆಎಂಎಫ್ಸಿ ನ್ಯಾಯಾಲಯವು ಆದೇಶಿಸಿದೆ. ಫೆಬ್ರವರಿ 20ರ ರಾತ್ರಿ ನಡೆದ ಹರ್ಷ ಕೊಲೆ ಪ್ರಕರಣದಲ್ಲಿ ಇದುವರೆಗೆ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಎರಡನೇ ಜೆಎಂಎಫ್ಸಿ ನ್ಯಾಯಾಧೀಶರಾದ ಶ್ರೀಮತಿ ಸಮ್ಮತಿರವರು, ಮಾರ್ಚ್ 7ರ ತನಕ ಆರೋಪಿಗಳನ್ನು ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ. ಇಂದು ಸಿಇಎನ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್, ಬಂಧಿತ ಎಲ್ಲ 10 ಜನ ಆರೋಪಿಗಳನ್ನು ಶಿವಮೊಗ್ಗದ ಎರಡನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಈ ವೇಳೆ ನ್ಯಾಯಾಧೀಶರ ಮುಂದೆ ಪೊಲೀಸರು, ಕೊಲೆ ಪ್ರಕರಣದಲ್ಲಿ 10 ಆರೋಪಿಗಳನ್ನು ಇನ್ನೂ ಹೆಚ್ಚಿನ ವಿಚಾರಣೆ ನಡೆಸಬೇಕಾಗಿದೆ. ಹೀಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಹಿಜಾಬ್ ನಿರ್ಬಂಧ ಪ್ರಶ್ನಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ಪೂರ್ಣ.. ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ನ್ಯಾಯಾಧೀಶರು ಮಾರ್ಚ್ 7ರ ತನಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಎಲ್ಲ 10 ಮಂದಿ ಬಂಧಿತರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಎಲ್ಲ ಆರೋಪಿಗಳಿಗೂ ಮುಖಕ್ಕೆ ಮುಸುಕಿ ಹಾಕಿ ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು.