ಶಿವಮೊಗ್ಗ: ನಗರದ ಹೊರ ವಲಯದಲ್ಲಿರುವ ಮಲ್ಲಿಗೆನಹಳ್ಳಿ ಸಮಿಪದ ಹಕ್ಕಿ ಪಿಕ್ಕಿ ಕ್ಯಾಂಪ್ ಅನ್ನು ನೂರಾರು ಜನ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಒತ್ತುವರಿ ತೆರವು ಮಾಡಲಾಯಿತು.
ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ್ದ ಸರ್ವೇ ನಂ 18, 19ರ 5.2 ಎಕರೆ ಸರ್ಕಾರಿ ಜಮೀನಿನಲ್ಲಿ 150ಕ್ಕೂ ಹೆಚ್ಚು ಹಕ್ಕಿ ಪಿಕ್ಕಿ ಜನಾಂಗದ ಕುಟುಂಬಗಳು ಕಳೆದ ಹತ್ತು ವರ್ಷಗಳಿಂದ ಒತ್ತುವರಿ ಮಾಡಿಕೊಂಡು ವಾಸವಿದ್ದಾರೆ. ಹಾಗಾಗಿ ಕೋರ್ಟ್ ಆದೇಶದ ಮೇರೆಗೆ ಕಳೆದ ಮೂರು ತಿಂಗಳ ಹಿಂದೆ ವಾಸವಿರುವ ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ. ಆದರೂ ತೆರವು ಮಾಡದ ಹಿನ್ನೆಲೆಯಲ್ಲಿ ನೀರಾವರಿ ನಿಗಮದ ಅಧಿಕಾರಿಗಳು ನೂರಾರು ಜನ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ನಲ್ಲಿ ತೆರವು ಮಾಡಲು ಆಗಮಿಸಿದ್ದರು.
ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು. ಆದರೂ ಬಿಡದ ಅಧಿಕಾರಿಗಳು ಎರಡು ಜೆಸಿಬಿಗಳ ಮೂಲಕ ಒತ್ತುವರಿ ಆರಂಭಿಸಿದರು. ಈ ವೇಳೆಯಲ್ಲಿ ಜೆಸಿಬಿಗೆ ಮಹಿಳೆಯರು, ಪುರುಷರು ಅಡ್ಡ ಬಂದರು. ಆದರೂ ಬಿಡದೆ ಅವರನ್ನು ಪೊಲೀಸರು ವಶಕ್ಕೆ ಪಡೆದು ತೆರವು ಮುಂದುವರಿಸಿದರು.
ವಾಸದ ಮನೆಗಳಿಗೆ 15 ದಿನ ಕಾಲಾವಕಾಶ: ಇಂದು ಖಾಲಿ ಇರುವ ಮನೆಗಳನ್ನು ತೆರವುಗೊಳಿಸಿದ ಅಧಿಕಾರಿಗಳು ವಾಸವಿರುವ ಕುಟುಂಬಗಳಿಗೆ 15 ದಿನಗಳ ಗಡುವು ನೀಡಿ ಅಷ್ಟರಲ್ಲಿ ಮನೆ ಖಾಲಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವು ಮಾಡುವಾಗ ಕುಟುಂಬಸ್ಥ ಆಕ್ರಂದನ ಮುಗಿಲು ಮುಟ್ಟಿತ್ತು. ಭಗವಂತ ನಿಮಗೆ ಒಳ್ಳೆಯದು ಮಾಡಲ್ಲಾ ಎಂದು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಇದನ್ನೂ ಓದಿ: ಕಂದಾಯ ಇಲಾಖೆ ಸರ್ವೇ ಬಳಿಕ ರಾಜಕಾಲುವೆ ತೆರವು ಮುಂದುವರಿಕೆ : ಬಿಬಿಎಂಪಿ ಆಯುಕ್ತರು