ಶಿವಮೊಗ್ಗ: ಕೃಷಿ ಭೂಮಿ ಖರೀದಿ ಸೆಕ್ಷನ್ 79 (ಎ) ಮತ್ತು (ಬಿ) ರದ್ದುಪಡಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ, ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಸರ್ಕಾರ ಕೃಷಿಭೂಮಿ ಖರೀದಿ ಸೆಕ್ಷನ್ 79 (ಎ) ಮತ್ತು (ಬಿ) ರದ್ದುಪಡಿಸಿದರೆ ರೈತರ ಕೈಯಲ್ಲಿ ಭೂಮಿ ಉಳಿಯುವುದಿಲ್ಲ. ರೈತರು ಹೆಚ್ಚು ಬೆಲೆ ಆಸೆಗೆ ಭೂಮಿ ಮಾರಾಟ ಮಾಡಿ, ನಗರದ ಕಡೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುವುದರಿಂದ ಕೂಡಲೇ ಇದನ್ನು ರದ್ದುಪಡಿಸ ಬೇಕು ಎಂದು ಒತ್ತಾಯಿಸಿದರು.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸರ್ಕಾರ, ಕೃಷಿಭೂಮಿ ಖರೀದಿಗೆ ಮಿತಿ ಹಾಕಿ 2 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಇರುವವರು ಭೂಮಿ ಖರೀದಿಸಬಾರದೆಂದು ಆದೇಶ ಮಾಡಿತ್ತು. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ, 2 ಲಕ್ಷ ಆದಾಯದ ಮಿತಿ ತೆಗೆದು 25 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದವರು ಕೃಷಿ ಭೂಮಿ ಖರೀದಿಸಬಾರದೆಂದು ಈ ಕಾನೂನನ್ನು ತಿದ್ದುಪಡಿ ಮಾಡಿತ್ತು ಎಂದರು.
ಕಂದಾಯ ಸಚಿವ ಆರ್. ಅಶೋಕ್‌ರವರು ಉದ್ಯಮಿಗಳು ಹೆಚ್ಚು ಹೆಚ್ಚು ಹೂಡಿಕೆ ಮಾಡುವ ಉದ್ದೇಶದಿಂದ ಭೂ ಖರೀದಿಯನ್ನು ಸರಳ ಮಾಡಲು ಭೂ ಸುಧಾರಣೆ ಕಾಯ್ದೆಯ ಸೆಕ್ಷನ್79 ಎ,ಬಿ ತೆಗೆದು ಹಾಕಲು ನಿರ್ಧರಿಸಲಾಗಿದೆ. ಮುಂದಿನ ಅಧಿವೇಶದಲ್ಲಿ ಮಸೂದೆಯನ್ನು ಮಂಡಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿರುವುದು ಖಂಡನೀಯ. ಕೈಗಾರಿಕೆಗಳಿಗೆ ನೀಡಿರುವ ಭೂಮಿಯಲ್ಲಿ ಎಷ್ಟು ಬಳಕೆ ಆಗಿದೆ ಎಂಬ ಬಗ್ಗೆ ಈವರೆಗೂ ಆಡಿಟ್ ನಡೆದಿಲ್ಲ, ಕೈಗಾರಿಕೆಗಳಿಗೆ ನೀಡಿರುವ ಭೂಮಿಯಲ್ಲಿ ಎಷ್ಟು ಬಳಕೆಯಾಗಿದೆ, ಎಷ್ಟು ದುರುಪಯೋಗವಾಗಿದೆ, ಎಷ್ಟು ಉಳಿದಿದೆ ಎಂಬ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರಮುಖರಾದ ಕೆ.ರಾಘವೇಂದ್ರ, ಹಿಟ್ಟೂರು ರಾಜು, ಸಿ.ಚಂದ್ರಪ್ಪ, ಇ.ಬಿ ಜಗದೀಶ್, ಕೆ.ಎನ್ ಜ್ಞಾನೇಶ್ ಮತ್ತಿತರರು ಉಪಸ್ಥಿತರಿದ್ದರು.