ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಂಬ್ ಇರಿಸಿದ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಸಹ ಅವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುವ ಬಗ್ಗೆ ಅನುಮಾನ ಬೇಡ. ಇದನ್ನು ಕಾಂಗ್ರೆಸ್, ಜೆಡಿಎಸ್ನವರು ರಾಜಕೀಯವಾಗಿ ಬಳಸಿಕೊಂಡು ಪೊಲೀಸರ ಆತ್ಮ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು ಎಂದರು.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಎಲ್ಲ ಮುಖಂಡರು ಮತ್ತು ನಾಯಕರು ಒಟ್ಟಿಗೆ ಸೇರಿ ದುಷ್ಕರ್ಮಿಗಳ ವಿರುದ್ಧ ದಿಟ್ಟ ಹೆಜ್ಜೆ ಇಡಬೇಕು. ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಯಾರೇ ಆಗಲಿ ತನಿಖೆ ಆಗುವ ತನಕ ಕಾಯಬೇಕು. ತನಿಖೆಯ ವರದಿಯೇ ಬಂದಿಲ್ಲ. ಸುಮ್ಮನೆ ಪೊಲೀಸರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ರು.
ಸಿಎಎ, ಎನ್ಆರ್ಸಿ ವಿರುದ್ಧ ಮಾತನಾಡುವವರು ಬಿಜೆಪಿ ವಿರೋಧಿಗಳು:
ಎನ್ಆರ್ಸಿ, ಸಿಎಎ ವಿರುದ್ಧ ಮಾತನಾಡುವವರು ಬಿಜೆಪಿ ವಿರೋಧಿಗಳು ಮತ್ತು ದೇಶದ್ರೋಹಿಗಳು. ದೇಶದಲ್ಲಿ ಎನ್ಆರ್ಸಿ ಬೇಡವೆಂದು ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರೇ ಹೇಳ್ತಾ ಇದ್ದಾರೆ. ಈ ಕಾನೂನಿನಿಂದ ಯಾವುದೇ ಮುಸ್ಲಿಂರಿಗೆ ಅನ್ಯಾಯವಾಗಲ್ಲ. ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ದೇಶದ ಜನರಿಗೆ ಇಂದಲ್ಲ ನಾಳೆ ತಿಳಿಯುತ್ತದೆ. ಆಗ ಎಲ್ಲರೂ ಈ ಕಾನೂನನ್ನು ಸ್ವಾಗತಿಸಲಿದ್ದಾರೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಿಜೆಪಿಗೆ ಬಂದವರು ಹಾಲು ಸಕ್ಕರೆ ರೀತಿ ಬೆರೆತುಕೊಂಡಿದ್ದೇವೆ. ನಮಲ್ಲಿ ಮೂಲ, ವಲಸಿಗರು ಎಂಬ ಭೇದ ಭಾವವಿಲ್ಲ. ಬಿಜೆಪಿಗೆ ಬಂದ ಶಾಸಕರುಗಳಿಗೆ ಸಚಿವ ಸ್ಥಾನ ನೀಡುವುದು ನಮ್ಮ ಕರ್ತವ್ಯ. ಈ ಕುರಿತು ಕೇಂದ್ರ ಹಾಗೂ ರಾಜ್ಯದ ವರಿಷ್ಠರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಕಾಂಗ್ರೆಸ್ನಲ್ಲಿ ಎಲ್ಲಾ ನಾಯಕರು ಹೆಸರಿಗಷ್ಟೇ ಹಾಲು ಸಕ್ಕರೆತಯಂತೆ ಇದ್ದಾರೆ. ಆದ್ರೆ ಒಳಗೊಳಗೆ ಸಿದ್ದರಾಮಯ್ಯನವರ ವಿರುದ್ಧ ಮೂಲ ಕಾಂಗ್ರೆಸ್‌ನವರು ತಿರುಗಿ ಬಿದ್ದಿದ್ದಾರೆ. ನಾವು ಹಾಲು ಸಕ್ಕರೆಯಾದ್ರೆ, ಕಾಂಗ್ರೆಸ್‌ನವರು ಹಾಲು ವಿಷ ವಿದ್ದಂತೆ ಎಂದು ಸಚಿವ ಈಶ್ವರಪ್ಪ ಟೀಕಿಸಿದರು.