ಶಿವಮೊಗ್ಗ ಜಿಲ್ಲೆ; ಭೂಸ್ವಾಧೀನಕ್ಕೆ ತಕ್ಕಂತೆ ಪುನರ್ವಸತಿ ಕಲ್ಪಿಸುವುದನ್ನೇ ಮರೆತ ಸರ್ಕಾರಗಳು..! - ಅಣೆಕಟ್ಟುಗಳು ನಿರ್ಮಾಣ
ಅಣೆಕಟ್ಟುಗಳು ನಿರ್ಮಾಣವಾಗಿ ಈಗಾಗಲೇ ಐದಾರು ದಶಕಗಳೆ ಕಳೆದಿವೆ. ಇದರಿಂದ ಅಣೆಕಟ್ಟು ನಿರ್ಮಾಣಕ್ಕೆ ಭೂಮಿ ಕಳೆದು ಕೊಂಡವರಿಗೆ ಆಗ ನೀಡಬೇಕಾದ ಹಣವನ್ನು ನೀಡಿ ಪರಿಹಾರ ಒದಗಿಸಿದೆ. ಇನ್ನೂ ಹಲವು ಗ್ರಾಮಗಳನ್ನು ಸ್ಥಳಾಂತರ ಮಾಡಿರುವುದರಿಂದ ಅವರಿಗೆ ಭೂಮಿ ಸಿಕ್ಕಿದಿಯೇ ಹೊರತು ಕೃಷಿ ಭೂಮಿ ನಿರೀಕ್ಷಿದಷ್ಟು ಪ್ರಮಾಣದಲ್ಲಿ ಲಭ್ಯವಾಗಲಿಲ್ಲ.

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಎಂದು ಕರೆಯಲ್ಪಡುವ ಶಿವಮೊಗ್ಗ ಜಿಲ್ಲೆಯಲ್ಲಿ ಐದು ಅಣೆಕಟ್ಟೆಗಳನ್ನು ನಿರ್ಮಾಣ ಮಾಡುವುದಾಗಿ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ಹಾಗೂ ನೂರಾರು ಎಕರೆ ಕೃಷಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದೆ. ಕೆಲವು ಕಡೆ ಗ್ರಾಮಗಳನ್ನೇ ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯ ಶಿಕಾರಿಪುರ ತಾಲೂಕು ಹೊರತುಪಡಿಸಿದರೆ ಉಳಿದ ಆರು ತಾಲೂಕುಗಳು ಅರಣ್ಯದಿಂದ ಕೂಡಿರುವ ತಾಲೂಕುಗಳಾಗಿವೆ. ಅಭಿವೃದ್ಧಿ ಕೆಲಸಗಳಿಗಾಗಿ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿಯನ್ನು ಹಾಗೂ ಕಂದಾಯ ಭೂಮಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ತುಂಗಾ, ಭದ್ರಾ, ಶರಾವತಿ, ವಾರಾಹಿ, ಚಕ್ರ, ಸಾವೆಹಕ್ಲು ಅಣೆಕಟ್ಟು ನಿರ್ಮಾಣಕ್ಕೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ಅಂಜನಪುರ, ಅಂಬ್ಲಗೊಳ ಕಿರು ಅಣೆಕಟ್ಟುಗಳನ್ನು ಸಹ ಮಾಡಲಾಗಿದೆ. ಈ ರೀತಿಯ ಅಭಿವೃದ್ಧಿ ಯೋಜನೆಗಳಿಗಾಗಿ ನಿರಂತರವಾಗಿ ಅರಣ್ಯ ಭೂಮಿಯನ್ನು ಪಡೆಯಲಾಗಿದೆ.
ಕೇವಲ ಅಣೆಕಟ್ಟೆಗಷ್ಟೇ ಅಲ್ಲದೆ, ಅಣೆಕಟ್ಟು ನಿರ್ಮಾಣದ ನಂತರ ಕೃಷಿ ಭೂಮಿಗೆ ನೀರು ನೀಡಲು ಕಾಲುವೆ ನಿರ್ಮಾಣ ಮಾಡಲು ಹಾಗೂ ರಸ್ತೆ ನಿರ್ಮಾಣಕ್ಕೂ ಸಹ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.
ಹೀಗೆ ಅಣೆಕಟ್ಟುಗಳು ನಿರ್ಮಾಣವಾಗಿ ಈಗಾಗಲೇ ಐದಾರು ದಶಕಗಳೆ ಕಳೆದಿವೆ. ಆದರೆ ಭೂಮಿ ಕಳೆದುಕೊಂಡವರಿಗೆ ಆಗ ನೀಡಬೇಕಾದ ಹಣವನ್ನು ನೀಡಿ ಪರಿಹಾರ ಒದಗಿಸಿದೆ. ಇನ್ನೂ ಹಲವು ಗ್ರಾಮಗಳನ್ನು ಸ್ಥಳಾಂತರ ಮಾಡಿರುವುದರಿಂದ ಅವರಿಗೆ ಭೂಮಿ ಸಿಕ್ಕಿದೆಯೇ ಹೊರತು ಕೃಷಿ ಭೂಮಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಲಭ್ಯವಾಗಲಿಲ್ಲ. ಚಕ್ರಾ-ಸಾವೆಹಕ್ಲು ಭಾಗದ ಜನರನ್ನು ಒಕ್ಕಲೆಬ್ಬಿಸಿ, ಅವರನ್ನು ಶಿವಮೊಗ್ಗದ ಹಾಯ್ ಹೊಳೆ ಭಾಗದ ಕಿರು ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. ಇಲ್ಲಿ ಇನ್ನೂ ಈ ಭಾಗದ ಜನರಿಗೆ ಕೃಷಿ ಭೂಮಿ ನಿರೀಕ್ಷಿಸಿದ ಪ್ರಮಾಣದಷ್ಟು ನೀಡಲು ಸಾಧ್ಯವಾಗಿಲ್ಲ.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ:
ನಾಡಿಗೆ ವಿದ್ಯುತ್ ನೀಡಲು 1960 ರ ದಶಕದಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಗ್ರಾಮ ಬಳಿ ಅಣೆಕಟ್ಟು ನಿರ್ಮಾಣ ಮಾಡಲಾಯಿತು. ಇಲ್ಲಿ ಜಲ ವಿದ್ಯುತ್ ತಯಾರು ಮಾಡಲಾಗುತ್ತದೆ. ಏಷ್ಯಾದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ ಒಂದು ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ಕೇವಲ 25 ರಿಂದ 30 ಪೈಸೆ ಖರ್ಚಾಗುತ್ತದೆ. ಅಲ್ಲದೇ ಇದು ಪರಿಸರ ಸ್ನೇಹಿಯಾಗಿದೆ. ಇಂತಹ ಅಣೆಕಟ್ಟೆ ನಿರ್ಮಾಣ ಮಾಡುವಾಗ ನೂರಾರು ಗ್ರಾಮಗಳು ಮುಳುಗಡೆಯಾದವು. ಸಾವಿರಾರು ಜನ ತಮ್ಮ ಮನೆ, ಕೃಷಿ ಭೂಮಿ ಸೇರಿದಂತೆ ತಮ್ಮ ಸರ್ವಸ್ವವನ್ನೂ ಕಳೆದುಕೊಂಡರು. ಅಣೆಕಟ್ಟು ನಿರ್ಮಾಣ ಮಾಡುವಾಗ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರಿಯಾದ ನಿರ್ಧಾರ ತೆಗೆದುಕೊಳ್ಳದ ಅಧಿಕಾರಿಗಳಿಂದಾಗಿ ಇಂದಿಗೂ ಸಹ ನಿರಾಶ್ರಿತರು ನಿರಾಶ್ರಿತರಾಗಿಯೇ ಉಳಿದುಕೊಂಡಿದ್ದಾರೆ. ಅಣೆಕಟ್ಟು ನಿರ್ಮಾಣವಾಗುವ ಮೊದಲು ಶ್ರೀಮಂತವಾಗಿ, ಉತ್ತಮ ಜೀವನ ನಡೆಸುತ್ತಿದ್ದವರು ತಮ್ಮ ಎಲ್ಲಾ ಆಸ್ತಿ ಕಳೆದುಕೊಂಡರು. ಅಣೆಕಟ್ಟು ನಿರ್ಮಾಣವಾಗಿ ನೀರು ಸಂಗ್ರಹವಾಗುತ್ತಾ ಬಂದಂತೆ ಅಲ್ಲಿನ ಒಂದೊಂದೇ ಗ್ರಾಮಗಳನ್ನು ಸ್ಥಳಾಂತರ ಮಾಡಲಾಯಿತು. ಅಲ್ಲಿ ಇದ್ದ ಜನರನ್ನು ಹಾಗೂ ಜಾನುವಾರುಗಳನ್ನು ಲಾರಿಯಲ್ಲಿ ತುಂಬಿಕೊಂಡು ಅವರಿಗೆ ಪರಿಚಯವೇ ಇಲ್ಲದ ಅರಣ್ಯದೊಳಗೆ ಬಿಟ್ಟು ಹೋಗಲಾಯಿತು. ಅವರಿಗೆ ಕಳೆದು ಕೊಂಡ ಭೂಮಿಯನ್ನು ನೀಡದೆ ಹಾಗೆಯೇ ಬಿಟ್ಟು ಹೋಗಲಾಯಿತು.
ಹೀಗೆ ಇವರನ್ನು ಬಿಟ್ಟು ಹೋಗುವಾಗ ಯಾರಿಗೂ ಭೂಮಿಯನ್ನು ಅಳತೆ ಮಾಡಿ ನೀಡಲಿಲ್ಲ. ಯಾರ ಬಳಿಯೂ ಸಹ ಭೂಮಿ ಒಡೆತನದ ಪತ್ರಗಳಿಲ್ಲ. ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣ ಮಾಡಲು ಸುಮಾರು 12 ಸಾವಿರ ಹೆಕ್ಟೇರ್ ಭೂಮಿಯನ್ನು ವಶಕ್ಕೆ ಪಡೆಯಲಾಯಿತು. ಆದರೆ ಪುನರ್ವವಸತಿ ಕಲ್ಪಿಸಿದ್ದು ಮಾತ್ರ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ. ಇದಾದ ನಂತರ ಭೂ ಸುಧಾರಣಾ, ಉಳುವವನ ಭೂ ಒಡೆಯ ಕಾಯ್ದೆಗಳು ಬಂದವು. ಇದರಿಂದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಯಾವುದೇ ಲಾಭವಾಗಲಿಲ್ಲ. ಇವರಿಗೆಲ್ಲಾ ಈಗಾಗಲೇ ಕಂದಾಯ ಭೂಮಿ ಅಂತ ಸರ್ಕಾರ ನೀಡಿದ್ರು ಸಹ ಅರಣ್ಯ ಇಲಾಖೆಯವರು ಇದು ಅರಣ್ಯ ಭೂಮಿ ಎಂದು ಬದಲಾಯಿಸಿ ಕೊಂಡು ಅವರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎನ್ನುತ್ತಾರೆ ಮುಳುಗಡೆ ಪ್ರದೇಶದ ಹಿರಿಯ ಪತ್ರಕರ್ತ ನಾಗರಾಜ್ ನೇರಿಗೆರವರು.
ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣದಲ್ಲಿ ನಿರಾಶ್ರಿತರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಇನ್ನೂ ಸರ್ಕಾರ ಭೂಮಿಯ ಪರಿಹಾರ ಪಡೆಯುವ ಕುರಿತು ಕೋರ್ಟ್ ಅಲೆದು ಸುಸ್ತಾಗುವುದನ್ನು ತಡೆಯಲು ಜಿಲ್ಲಾಧಿಕಾರಿಗಳಿಗೆ ಭೂ ವ್ಯಾಜ್ಯವನ್ನು ಬಗೆಹರಿಸಿ, ಅವರಿಗೆ ಪರಿಹಾರ ನೀಡುವ ಅಧಿಕಾರ ನೀಡಿದ್ದಾರೆ. ಆದರೆ ಅವರು ಭೂಮಿ ಕಳೆದುಕೊಂಡವರಿಗೆ ಸರಿಯಾದ ಪರಿಹಾರ ಒದಗಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ರೈತ ಸಂಘದ ಕೆ.ಟಿ. ಗಂಗಾಧರ್ ಆರೋಪಿಸಿದ್ದಾರೆ.