ಶಿವಮೊಗ್ಗ: ನಗರದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಆರೋಗ್ಯ ಇಲಾಖೆಯ ಮೂರು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ 9 ಅಭ್ಯರ್ಥಿಗಳ ಪೈಕಿ 5 ಜನ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಭಾರಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ದಿನೇಶ್, ಎಸ್.ಪಿ.ಶಾಂತರಾಜು, ಶಶಿಕುಮಾರ್ ಕಣದಲ್ಲಿ ಉಳಿದ ಅಭ್ಯರ್ಥಿಗಳಾಗಿದ್ದಾರೆ. ಇನ್ನುಳಿದವರು ಕಣದಿಂದ ಹಿಂದೆ ಸರಿದಿದ್ದಾರೆ. ಮತ್ತೋರ್ವ ಅಭ್ಯರ್ಥಿ ಚನ್ನಕೇಶವ ಎಂಬುವವರನ್ನು ಕೂಡ ಮನವೊಲಿಸಿ, ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಲಾಗುವುದು ಎಂದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಇದೂವರೆಗೂ ಅವಿರೋಧವಾಗಿ ಹಲವರು ಆಯ್ಕೆಯಾಗಿದ್ದಾರೆ. ಒಟ್ಟು 40 ಸ್ಥಾನಗಳ ಪೈಕಿ 35ಕ್ಕೂ ಹೆಚ್ಚು ಸ್ಥಾನ ನಮ್ಮ ತಂಡದವರು ಗೆಲ್ಲುವ ವಿಶ್ವಾಸವಿದೆ ಎಂದರು. ಒಟ್ಟಾರೆ ಅವಿರೋಧವಾಗಿ ಆಯ್ಕೆಯಾಗುವುದರಿಂದ ಚುನಾವಣಾ ಖರ್ಚು ಸಂಘಕ್ಕೆ ಉಳಿಯುತ್ತದೆ ಮತ್ತು ಸಮನ್ವಯತೆಯನ್ನು ಸಾಧಿಸುವಂತಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಡಾ. ಗುಡದಪ್ಪ, ಡಾ. ನಾಗರಾಜ್ ನಾಯಕ್, ದಿನೇಶ್, ಶಾಂತರಾಜು, ಶಶಿಕುಮಾರ್, ಮಂಜುನಾಥ್, ಮಂಜುಳಾ, ಚಂದ್ರಕಲಾ, ಪ್ರಭಾಕರ್ ಮತ್ತಿತರರು ಇದ್ದರು.