ಶಿವಮೊಗ್ಗ: ಸರ್ಕಾರದ ಆದೇಶದಂತೆ ಕೋವಿಡ್‌ನಿಂದಾಗಿ ಮುಚ್ಚಿದ್ದ ಶಾಲೆಗಳೀಗ ಬೀಗ ತೆರೆಯುತ್ತಿವೆ. ಮಕ್ಕಳು ಕೂಡ ಶಾಲೆಗಳಿಗೆ ಮರಳಲು ಉತ್ಸುಕರಾಗಿದ್ದಾರೆ. ಈ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡಿ ಮಕ್ಕಳನ್ನು ಭರ್ಜರಿಯಾಗಿ ಸ್ವಾಗತಿಸಲು ಶಾಲೆಗಳು ಸಜ್ಜಾಗ್ತಿವೆ. ಅದೇ ರೀತಿ ಇಲ್ಲೊಂದು ಶಾಲೆ ಸೌಕರ್ಯ ಮತ್ತು ಸೌಂದರ್ಯದಿಂದ ವಿದ್ಯಾರ್ಥಿಗಳನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.
ಬಹುದಿನಗಳಿಂದ ಮನೆಯಲ್ಲೇ ಉಳಿದಿದ್ದ ಮಕ್ಕಳು ಶಾಲೆಗಳತ್ತ ಮುಖ ಮಾಡುತ್ತಿದ್ದು, ಅವರನ್ನು ಶಾಲೆಗೆ ಮತ್ತೆ ಆಕರ್ಷಿಸಲು ಶಿವಮೊಗ್ಗದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಸೇರಿ ಹೊಸ ಯೋಜನೆ ರೂಪಿಸಿ ವಿನೂತನ ಪ್ರಯತ್ನವೊಂದನ್ನ ಮಾಡಿದ್ದಾರೆ. ಕೇವಲ ಮಕ್ಕಳಷ್ಟೇ ಅಲ್ಲ ಪೋಷಕರು ಇದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸೌಲಭ್ಯ ವಂಚಿತ ಶಾಲೆಗಳು ಎಂಬುದು ಸರ್ಕಾರಿ ಶಾಲೆಗಳಿಗೆ ಅಂಟಿರುವ ಹಣೆಪಟ್ಟಿ. ಹೀಗಾಗಿ ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು ಹಾಕುತ್ತಾರೆ. ಇದನ್ನು ತಪ್ಪಿಸಲು ನಿರ್ಧರಿಸಿದ ಯುವಕರ ತಂಡ, ತಾವು ಓದಿದ ಶಿವಮೊಗ್ಗ ತಾಲೂಕಿನ ತ್ಯಾವರೆಚಟ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೇ ಆಯ್ಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಅದರಂತೆ ಶಾಲೆಯ ಕಟ್ಟಡಕ್ಕೆ ರೈಲಿನ ಬೋಗಿಯ ರೀತಿಯಲ್ಲಿ ಬಣ್ಣ ಬಳಿಯಲಾಗಿದೆ. ಹೀಗಾಗಿ ಶಾಲೆಯ ಸ್ವರೂಪವೇ ಬದಲಾಗಿದ್ದು, ಈ ಶಾಲೆಯ ವಾತವರಣವೀಗ ಆಕರ್ಷಣೀಯ ಕೇಂದ್ರವಾಗಿದೆ.
ಇನ್ನು, ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ತ್ಯಾವರೆಚಟ್ನಹಳ್ಳಿ ಶಾಲೆಗೆ ಅನುದಾನ ನೀಡಲಾಗಿದೆ. ಶಾಲೆಯ ಛಾವಣಿಯನ್ನು ದುರಸ್ತಿ ಮಾಡಲಾಗಿದೆ. ಇದರ ಜೊತೆಗೆ ಸ್ಮಾರ್ಟ್ ಕ್ಲಾಸ್ ಆರಂಭಿಸುವ ಸಲುವಾಗಿ ಕಂಪ್ಯೂಟರ್ ಹಾಗೂ ಪೊಜೆಕ್ಟರ್ ಗಳನ್ನು ಸಹ ನೀಡಲಾಗಿದೆ. ಮಾತ್ರವಲ್ಲದೇ ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಕೆಗೆ ಒತ್ತು ನೀಡುವ ಸಲುವಾಗಿ ಪ್ರತ್ಯೇಕವಾಗಿ ಇಂಗ್ಲಿಷ್ ತರಗತಿ ಕೊಠಡಿಯನ್ನು ಆರಂಭಿಸಲಾಗಿದೆ. ಸ್ಥಳೀಯರು ಸಹ ಸರ್ಕಾರಿ ಶಾಲೆ ಬಗ್ಗೆ ಒಲವು ತೋರುತ್ತಿದ್ದಾರೆ. ಇದರ ಪರಿಣಾಮವಾಗಿ ಈ ವರ್ಷ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಾಗಿದೆ.
ಈ ಯುವಕರಂತೆ ಎಲ್ಲರೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದರೆ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರು ಇಂತಹ ಶಾಲೆಗಳನ್ನೇ ಹುಡುಕಿಕೊಂಡು ಬರುವುದಂತು ಸತ್ಯ.