ಶಿವಮೊಗ್ಗ : ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡದೆ ಇದ್ದರೆ ನಮಗೆ ಬೇಜಾರಿಲ್ಲ, ರಾಮ ನಮಗೂ ಸೇರಿದವನು, ನಾನು ರಾಮನಿಗೆ ಇಲ್ಲೇ ನಿಂತು ಜೈ ಶ್ರೀರಾಮ್ ಅಂತ ಕೈ ಮುಗಿಯುತ್ತೇವೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಿಎಂ ಸಿದ್ದರಾಮಯ್ಯನವರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡದೆ ಇರುವುದಕ್ಕೆ ಪ್ರತಿಕ್ರಿಯಿಸಿದರು.
ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡದೆ ಇರುವುದಕ್ಕೆ ನಮಗೆ ಬೇಜಾರಿಲ್ಲ. ದೇವರು ಎಲ್ಲರಿಗೂ ದೇವರೇ, ಅವರು ಕೈ ಮುಗಿಯುತ್ತಾರೆ ನಾವೂ ಕೂಡ ಕೈ ಮುಗಿಯುತ್ತೇವೆ ಎಂದರು. ನಿಗಮ ಮಂಡಳಿಗಳನ್ನು ಶಾಸಕರು, ಕಾರ್ಯಕರ್ತರಿಗೆ ಕೊಡುವ ಬಗ್ಗೆ ತೀರ್ಮಾನ ಆಗಿದೆ. ಕಾರ್ಯಕರ್ತರು, ಮುಖಂಡರು, ಶಾಸಕರು ಎಲ್ಲರಿಗೂ ಕೊಡಬೇಕು. ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋಗಿದ್ದಾರೆ. ಮುಂದಿನ ಎರಡು ಮೂರು ದಿನದಲ್ಲಿ ನಿಗಮ ಮಂಡಳಿಗಳ ನೇಮಕ ಆಗಬಹುದು, ನಾನು ನಿಗಮ ಮಂಡಳಿ ಕೊಡಿ ಅಂತ ಕೇಳಿಲ್ಲ ಎಂದರು.
ಲೋಕಸಭೆ ಚುನಾವಣೆಗೆ ಸ್ಪರ್ಧೆ ವಿಚಾರ : ಲೋಕಸಭೆಗೆ ಸ್ಪರ್ಧಿಸಲು ಆನೇಕ ಮಂದಿ ಆಕಾಂಕ್ಷಿಗಳು ಇದ್ದಾರೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಸಂಗಮೇಶ್ವರ ಹಾಗು ಬೇಳೂರು ಗೋಪಾಲಕೃಷ್ಣ ಮೂವರು ಕುಳಿತು ಚರ್ಚಿಸುವಂತೆ ಪಕ್ಷದ ವರಿಷ್ಠರು ಹೇಳಿದ್ದಾರೆ. ಮೂರು ಜನ ಕುಳಿತು ಚರ್ಚೆ ಮಾಡಿ ಪಟ್ಟಿ ಕೊಡಿ ಅಂದಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ರಾಮ ಮಂದಿರ ಉದ್ಘಾಟನೆ ವೇಳೆ ಕರ ಸೇವಕರನ್ನು ಅರೆಸ್ಟ್ ಮಾಡುವ ಅಗತ್ಯ ಏನಿತ್ತು? ಜೋಶಿ ವಾಗ್ದಾಳಿ
ಬಿಜೆಪಿ ಪ್ರತಿಭಟನೆ ವಿಚಾರ : ಬಿಜೆಪಿ ವಿಪಕ್ಷವಾಗಿ ಪ್ರತಿಭಟನೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಅವರು ಎಲ್ಲದಕ್ಕೂ ಪ್ರತಿಭಟನೆ ಮಾಡುತ್ತಿದ್ದಾರೆ. ಯಾರ ಕಾಲದಲ್ಲಿ ಗೂಂಡಾ ರಾಜ್ಯ ಆಗಿತ್ತು ಅನ್ನೋದು ಗೊತ್ತಿದೆ. ಗೂಂಡಾ ರಾಜ್ಯ ಆಗಿದ್ದಕ್ಕೆ ಜನರು 67ಕ್ಕೆ ಕೂರಿಸಿದರು ಎಂದು ಬಿಜೆಪಿ ಯವರಿಗೆ ತಿರುಗೇಟು ನೀಡಿದರು.
ಮಧು ಬಂಗಾರಪ್ಪ ಚೆಕ್ ಬೌನ್ಸ್ ಪ್ರಕರಣ ವಿಚಾರ : ಕೋರ್ಟ್ನಲ್ಲಿ ತೀರ್ಮಾನ ಆದಾಗ ಆಪಾದನೆ ಬರುತ್ತವೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾನು ಮಾತನಾಡುವುದಿಲ್ಲ. 40 ಸಾವಿರ ಕೋಟಿ ಹಗರಣ ಆಗಿದೆ ಅಂತ ಯತ್ನಾಳ್ ಹೇಳಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಬೇಕು. ಪಿಎಸ್ಐ ಹಗರಣದಲ್ಲಿ ವಿಜಯೇಂದ್ರ ಹೆಸರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಿ ಎಂದು ಬೇಳೂರು ಒತ್ತಾಯಿಸಿದರು.
ಇದನ್ನೂ ಓದಿ : ಬಿಜೆಪಿಯವರಿಗೆ ರಾಮ ಗೊತ್ತು ಅಷ್ಟೇ, ರಾಮರಾಜ್ಯ ಗೊತ್ತಿಲ್ಲ: ಸಚಿವ ಆರ್ ಬಿ ತಿಮ್ಮಾಪುರ