ಶಿವಮೊಗ್ಗ: ಸರ್ಕಾರದ ಆದೇಶ ಮೀರಿ ಯಾರಾದರೂ ನಡೆದುಕೊಂಡರೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಯಾರೂ ಕೂಡ ಆಸ್ಪದ ನೀಡಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶವಿದೆ. ಅದನ್ನು ಮೀರಿ ಯಾರಾದರೂ ವ್ಯಾಪಾರ-ವಹಿವಾಟು ಮಾಡಿದರೆ ಹಾಗೂ ಸರ್ಕಾರದ ಆದೇಶ ಪಾಲಿಸದೆ ಹೋದರೆ ಪೊಲೀಸರು ಅವರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಾರೆ. ಹಾಗಾಗಿ ಸಾವರ್ಜನಿಕರು ಸಹ ಕೊರೊನಾ ಹೊಡೆದೋಡಿಸಲು ಸಹಕರಿಸಬೇಕು ಎಂದರು.
ಇದನ್ನೂ ಓದಿ: ಅಗತ್ಯ ವಸ್ತುಗಳನ್ನ ಖರೀದಿಗೆ ಸಮಯ ವಿಸ್ತರಿಸಿ :ಪೆರಿಕಲ್ ಎಂ ಸುಂದರ್
ವೀಕೆಂಡ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡುತ್ತಿದ್ದವರ 58 ವಾಹನಗಳನ್ನು ಜಪ್ತಿ ಮಾಡಲಾಗಿದೆ. 300 ಐಎಂವಿ ಪ್ರಕರಣಗಳನ್ನು ದಾಖಲಿಸಿದ್ದೇವೆ. 1,500ಕ್ಕೂ ಹೆಚ್ಚು ಮಾಸ್ಕ್ ಪ್ರಕರಣಗಳನ್ನು ದಾಖಲಿಸಿದ್ದೇವೆ. ಅಂತರ್ ಜಿಲ್ಲೆಯ ವಾಹನಗಳನ್ನು ತಪಾಸಣೆ ಮಾಡಲು ಚೆಕ್ ಪೋಸ್ಟ್ಗಳನ್ನು ಹಾಕಲಾಗುವುದು. ವೈನ್ ಶಾಪ್ ಪಕ್ಕದಲ್ಲಿ ಕೂತು ಯಾರಾದರೂ ಕುಡಿದರೂ ಕೂಡ ಆ ಶಾಪ್ಗಳ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಶಿವಮೊಗ್ಗ ಸ್ತಬ್ಧ:
ಸರ್ಕಾರದ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಿಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿದ್ದು ಕಂಡುಬಂತು.
ಬಸ್ ನಿಲ್ದಾಣ ಖಾಲಿ-ಖಾಲಿ:
ನಿನ್ನೆ ಬೆಳಗ್ಗೆ ಜನರಿಂದ ಗಲಿಬಿಲಿ ಎನ್ನುತ್ತಿದ್ದ ಬಸ್ ನಿಲ್ದಾಣ ಸಂಪೂರ್ಣ ಖಾಲಿಯಾಗಿದೆ. ಬೆಂಗಳೂರಿಗೆ ಹೋಗುವ ಎರಡ್ಮೂರು ಬಸ್ಗಳನ್ನು ಹೊರತುಪಡಿಸಿ ಯಾವ ಬಸ್ಗಳೂ ಸಹ ಬಸ್ ನಿಲ್ದಾಣದಲ್ಲಿರಲಿಲ್ಲ.