ಶಿವಮೊಗ್ಗ: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ಮಂದಿರ ನಿರ್ಮಾಣ ಕಾರ್ಯ ಹಿನ್ನೆಲೆ ಸಮಸ್ತ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆರ್ಎಸ್ಎಸ್ನ ದಕ್ಷಿಣ ಕರ್ನಾಟಕದ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದ್ದಾರೆ.
ಇಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕಾಗಿ ಮತ್ತು ಅಲ್ಲಿನ ಇತರೆ ಸೌಲಭ್ಯಗಳಿಗೆ ಅನುಕೂಲವಾಗುವಂತೆ, ದೇಶದಾದ್ಯಂತ ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದರಂತೆ 5 ಕಾರ್ಯಕರ್ತರನ್ನೊಳಗೊಂಡ ತಂಡಗಳು, ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲಾ ಹಳ್ಳಿಗಳನ್ನು ಈ ಅಭಿಯಾನದ ಮುಖಾಂತರ ತಲುಪಿ ನಿಧಿ ಸಮರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಅಭಿಯಾನಕ್ಕೆ ನಿಧಿ ಸಂಗ್ರಹ ಎಂಬ ಹೆಸರು ಕರೆಯುವ ಬದಲಾಗಿ, ನಿಧಿ ಸಮರ್ಪಣೆ ಎಂದು ಹೆಸರಿಸಲಾಗಿದೆ. ರಾಜ್ಯದ 27,500 ಹಳ್ಳಿಗಳಲ್ಲಿ, 90 ಲಕ್ಷ ಜನರನ್ನು ತಲುಪಿ, ರಾಮಮಂದಿರಕ್ಕೆ ಧನ ಸಂಗ್ರಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಅದರಂತೆ ಸಂಗ್ರಹವಾದ ಅಷ್ಟೂ ಹಣವನ್ನು, 48 ಗಂಟೆಯೊಳಗಾಗಿ, ತೀರ್ಥಕ್ಷೇತ್ರ ಟ್ರಸ್ಟ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲು ಯೋಜಿಸಲಾಗಿದೆ.
ಖಾತೆಗೆ ಹಣ ಪಾವತಿಸುವ ವ್ಯವಸ್ಥೆ ಸಂಪೂರ್ಣವಾಗಿ ಪಾರದರ್ಶಕವಾಗಿರಲಿದ್ದು, 10 ರೂ. ನಿಂದ ಹಿಡಿದು 1 ಸಾವಿರ ರೂ. ವರೆಗೂ ಮುದ್ರಿತ ಕೂಪನ್ಗಳ ಸಹಾಯದಿಂದ ಧನ ಸಂಗ್ರಹ ನಡೆಯಲಿದೆ. 2 ಸಾವಿರ ರೂ. ಗಿಂತಲೂ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಶೀದಿ ನೀಡಲಾಗುವುದು. ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್ ಅಡಿಯಲ್ಲಿ, ತೆರಿಗೆ ವಿನಾಯಿತಿ ಸೌಲಭ್ಯ ಕೂಡ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. 2024ರೊಳಗೆ ಶ್ರೀರಾಮ ಲಲ್ಲಾನನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಯೋಜಿಸಲಾಗಿದೆ ಎಂದು ಪಟ್ಟಾಭಿರಾಮ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ ವಿಶ್ವಗುರು ಆಗಲು ಸಂತರ ಮಾರ್ಗದರ್ಶನ ಅತ್ಯಗತ್ಯ: ಕನೇರಿಮಠದ ಕಾಡಸಿದ್ಧೇಶ್ವರ ಸ್ವಾಮೀಜಿ