ಶಿವಮೊಗ್ಗ: ಜಿಲ್ಲೆಯ ಹಾರನಹಳ್ಳಿ ಸಮೀಪದ ಹುಲಿಕೆರೆಯಲ್ಲಿ ಬೇಸಿಗೆಯಲ್ಲೂ ನೀರಿನ ಸಂಗ್ರಹವಿದ್ದು, ಜನ ಜಾನುವಾರುಗಳ ಜತೆಗೆ ನೂರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಸರ್ಕಾರಿ ಯೋಜನೆ ಸರಿಯಾಗಿ ಸದ್ಭಳಕೆ ಮಾಡಿಕೊಂಡ್ರೇ ಬೇಸಿಗೆಯ ಬವಣೆ ಹೇಗೆ ನಿಭಾಯಿಸಬಹುದು ಎನ್ನುವುದಕ್ಕೆ ಶಿವಮೊಗ್ಗ ಜಿಲ್ಲೆಯ ರಾಮನಗರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಠಗೊಂಡನಕೊಪ್ಪದ ಜನರೇ ಸಾಕ್ಷಿ.
ಈ ಮೊದಲು ಹುಲಿಕೆರೆಯೂ ಸಾಮಾನ್ಯವಾಗಿತ್ತು. 2002ರಲ್ಲಿ ಮುಖ್ಯಮಂಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಅವರು ವಿಶ್ವ ಬ್ಯಾಂಕ್ ನೆರವಿನಿಂದ ರಾಜ್ಯದ ಕೆರೆಗಳನ್ನು ಅಭಿವೃದ್ದಿಗೊಳಿಸುವುದಕ್ಕಾಗಿ ಜಲ ಸಂವರ್ಧನಾ ಯೋಜನೆ ಜಾರಿಗೆ ತಂದಿದ್ದರು. ನಂತರ ಬಿಎಸ್ವೈ ಅವರು ಈ ಯೋಜನೆಗೆ ವೇಗ ನೀಡಿದ್ರು.
ಇದರಿಂದ ಸ್ಫೂರ್ತಿಗೊಂಡ ವಿಠಗೊಂಡನಕೊಪ್ಪ ಗ್ರಾಮಸ್ಥರು ನಿವೃತ್ತ ಗ್ರಾಮ ಲೆಕ್ಕಿಗ ಸಿ.ಶಿವಾನಂದಪ್ಪ ಅವರ ಅಧ್ಯಕ್ಷತೆಯಲ್ಲಿ ಬಸವೇಶ್ವರ ಕೆರೆ ಅಭಿವೃದ್ಧಿ ಸಂಘ ಕಟ್ಟಿಕೊಂಡು ಗ್ರಾಮದ ವ್ಯಾಪ್ತಿಯ ಹುಲಿಕೆರೆ ಹಾಗೂ ಅಗಸಿನಕಟ್ಟೆ ಕೆರೆ ಅಭಿವೃದ್ಧಿಗೆ ಮುಂದಾದರು. ಸರ್ಕಾರ ಈ ಸಂಘಕ್ಕೆ ಕೆರೆಯನ್ನು ಹಸ್ತಾಂತರಿಸಿದಲ್ಲದೇ, ಕೆರೆ ಅಭಿವೃದ್ದಿಗಾಗಿ 14.40 ಲಕ್ಷ ರೂ. ಹಣವನ್ನು ಸಹ ಬಿಡುಗಡೆ ಮಾಡಿತ್ತು. ಸರ್ಕಾರದ ಹಣದಿಂದ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆಯ ಅಭಿವೃದ್ಧಿ ಕೆಲಸ ಕೈಗೊಂಡ ಸಂಘದ ಸದಸ್ಯರುಗಳು ಕೆರೆ ಹಾಗೂ ಸುತ್ತಲ ಕಾಲುವೆಗಳನ್ನು ಅಭಿವೃದ್ದಿ ಮಾಡಿದರು.
ಗುಡ್ಡಗಾಡು ಪ್ರದೇಶದ ಸಮೀಪವಿರುವ ವಿಠಗೊಂಡನಕೊಪ್ಪದ ಈ ಹುಲಿಕೆರೆ 8 ಎಕರೆ 4 ಗುಂಟೆ ವಿಸ್ತೀರ್ಣವಿದ್ದು, ಗುಡ್ಡಗಳಿಂದ ಹರಿದು ಬರುವ ನೀರು ಕೆರೆ ತುಂಬಿದ ಬಳಿಕ ನಂತರ ಇತರ ಕೆರೆಗಳಿಗೂ ಹರಿದು ಹೋಗುತ್ತದೆ. ಸುತ್ತಮುತ್ತಲ ಗ್ರಾಮಗಳ ಯಾವ ಕೆರೆಯಲ್ಲಿಯೂ ನೀರು ಲಭ್ಯವಿಲ್ಲದ ಕಾರಣ ವಿಠಗೊಂಡನ ಕೊಪ್ಪದ ಜಾನುವಾರುಗಳು ಮಾತ್ರವಲ್ಲದೇ, ಮರಸ, ಚಾಮೇನಹಳ್ಳಿ ಮುಂತಾದ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳು ಸಹ ಇಲ್ಲಿಗೆ ನೀರನ್ನರಸಿ ಬರುತ್ತವೆ. ಜತೆಗೆ ಸುತ್ತಲಿನ ಕಾಡು ಪ್ರಾಣಿಗಳು, ದೂರದಿಂದ ಬರುವ ವೈವಿಧ್ಯಮಯ ಪಕ್ಷಿ ಸಂಕುಲಗಳು ನೀರು ಹುಡುಕಿ ಬಂದರೆ, ಕುರಿಗಾಹಿಗಳು ಸಹ ಇದನ್ನೇ ಆಶ್ರಯಿಸಿದ್ದಾರೆ.
ಜನಸಾಮಾನ್ಯರೇ ಒಗ್ಗೂಡಿ ಕೆಲಸ ಮಾಡಿದರೇ ಯಾವುದೂ ಅಸಾಧ್ಯವಲ್ಲ ಎಂಬುದು ವಿಠಗೊಂಡನಕೊಪ್ಪದ ಗ್ರಾಮಸ್ಥರು ಸಾಬೀತುಪಡಿಸಿದ್ದಾರೆ. ಆ ಮೂಲಕ ಸರ್ಕಾರಿ ಯೋಜನೆಯ ಯಶಸ್ಸಿಗೂ ಕಾರಣವಾಗಿದ್ದಾರೆ.