ಶಿವಮೊಗ್ಗ: ಸಬ್ಸಿಡಿ ರೂಪದಲ್ಲಿ ಸಾಲ ಕೊಡಿಸುವುದಾಗಿ ಹೇಳಿ, ಮಹಿಳಾ ಸಂಘಗಳಿಂದ ಹಣ ಪಡೆದು ಪಲಾಯನ ಮಾಡುತ್ತಿದ್ದ ಎನ್ನಲಾದ ವ್ಯಕ್ತಿಯನ್ನು ಹಿಡಿದು ಹಣ ವಸೂಲಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಶಿವಮೊಗ್ಗ ಹೊರ ವಲಯದ ಶಾಂತಿನಗರದಲ್ಲಿ ಬಡ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಹಣ ವಸೂಲಿ ಮಾಡಿ ಪರಾರಿಯಾಗಲು ಯತ್ನಿಸಿದ್ದ ಎನ್ನಲಾದ ತುಮಕೂರು ಮೂಲದ ಮಂಜುನಾಥ್ನನ್ನು ಮಹಿಳೆಯರು ಹಿಡಿದು ತಮ್ಮ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ.
ತುಮಕೂರಿನ ಕ್ಯಾತಸಂದ್ರದ ಮಂಜುನಾಥ್ ಎಂಬಾತ ತಾನು ಕರ್ನಾಟಕ ಸ್ವ-ಸಹಾಯ ಸಂಘಗಳ ಒಕ್ಕೂಟ ಎಂಬ ಎನ್ಜಿಒ ಮಾಡಿಕೊಂಡಿದ್ದು, ನಿಮ್ಮ ಆಧಾರ್ ಹಾಗೂ ಫೋಟೋ ಪಡೆದು ಸಬ್ಸಿಡಿ ಸಾಲ ಕೊಡಿಸುವುದಾಗಿ ಹೇಳಿದ್ದನಂತೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ಸ್ವ-ಸಹಾಯ ಸಂಘಕ್ಕೆ 20 ಸಾವಿರ ರೂ. ಲೋನ್ ನೀಡಲಾಗುತ್ತದೆ. ಇದರಲ್ಲಿ 10 ಸಾವಿರ ಮಾತ್ರ ಮರುಪಾವತಿ ಮಾಡಬೇಕಾಗಿದ್ದು, ಉಳಿದ 10 ಸಾವಿರ ಸಬ್ಸಿಡಿ ಇರುತ್ತದೆ. ಪ್ರತಿ ತಿಂಗಳು 1 ಸಾವಿರ ರೂ. ಮರುಪಾವತಿ ಮಾಡಿದರೆ ಸಾಕು ಎಂದು ನಂಬಿಸಿದ್ದನಂತೆ.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟಕ್ಕೆ ಷರತ್ತು ಬದ್ಧ ಅನುಮತಿ ನೀಡಿದ ಸಹಾಯಕ ಆಯುಕ್ತರು
ಸಾಲ ಕೊಡಿಸುವುದಾಗಿ ಸುಮಾರು 37 ಜನ ಮಹಿಳೆಯರಿಂದ ತಲಾ 1 ಸಾವಿರ ರೂ. ಪಡೆದಿದ್ದ. ಸೋಮವಾರ ಹಣ ಪಡೆದು ಇಂದು ಲೋನ್ ನಿಮ್ಮ ಖಾತೆಗೆ ಬರುತ್ತದೆ ಎಂದು ಹೇಳಿದ್ದಾನೆ. ಆದರೆ ಮಂಜುನಾಥ್ ಬಗ್ಗೆ ಅನುಮಾನಗೊಂಡ ಮಹಿಳೆಯರು ಹಣ ತಮ್ಮ ಖಾತೆಗೆ ಬಾರದೆ ಇರುವುದರಿಂದ ಫೋನ್ ಮಾಡಿದ್ದರು. ಈತ ಇನ್ನಷ್ಟು ಮಹಿಳಾ ಗುಂಪುಗಳನ್ನು ಸೇರಿಸಿ ಎಂದು ಹೇಳಿದ್ದ. ಇತರೆ ಗುಂಪಿನ ಮಹಿಳೆಯರಿಂದ ಹಣ ಕೊಡಿಸುವುದಾಗಿ ಹೇಳಿದ್ದಕ್ಕೆ ಮಂಜುನಾಥ್ ಬಂದಿದ್ದಾನೆ.
ನಂತರ ಮೋಸ ಮಾಡಿದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಂಜುನಾಥ್ ಮಹಿಳೆಯರ ಹಣವನ್ನು ವಾಪಸ್ ಮಾಡಿದ್ದಾನೆ. ಈತ ನಕಲಿ ಕಚೇರಿ ಹಾಗೂ ನಕಲಿ ಸಂಘ ರಚನೆ ಮಾಡಿ ಡಿಸಿಸಿ ಬ್ಯಾಂಕ್ನಲ್ಲಿ ಖಾತೆ ತೆರೆದಿದ್ದಾನೆ. ಮಹಿಳೆಯರು ಪೊಲೀಸರನ್ನು ಕರೆಯಿಸಿ ಮಂಗಳಾರತಿ ಮಾಡಿಸಿದ್ದಾರೆ. ಹಣ ವಾಪಸ್ ನೀಡಿದ್ದರಿಂದ ಪೊಲೀಸರು ಮಂಜುನಾಥನನ್ನು ಬಂಧಿಸದೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.