ಶಿವಮೊಗ್ಗ: ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಸುಮ್ಮನೆ ಕೈ ಬೀಸಿದ್ರೆ ಸಾಕು, ರಾಹುಲ್ ಗಾಂಧಿ ಎಲ್ಲಿ ಅಂತ ಹುಡುಕಬೇಕಾಗುವ ಸ್ಥಿತಿ ಬರುತ್ತೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ರಾಹುಲ್ ಗಾಂಧಿ ವಿರುದ್ದ ಹಾಸ್ಯಭರಿತವಾಗಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಕಡೆ ಬರ್ತಾರೆ. ಆಗ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಧೂಳಿಪಟ್ಟ ಆಗುತ್ತಾರೆ ಎಂದರು.
ಸಿದ್ದರಾಮಯ್ಯಗೆ ನನ್ನ ಮೇಲೆ ಪ್ರೀತಿ ಬೇಡ: ಬಿಜೆಪಿಯವರಿಗೆ ಹಿಂದುಳಿದ ವರ್ಗದವರ ಮೇಲೆ ಪ್ರೀತಿ ಇದ್ರೆ, ಈಶ್ವರಪ್ಪನನ್ನು ಸಿಎಂ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರಿಗೆ ನನ್ನ ಮೇಲೆ ನಕಲಿ ಪ್ರೀತಿ ಇದೆ. ಏನು ಮಾಡಬೇಕೆಂದು ನಮ್ಮ ಪಕ್ಷದವರಿಗೆ ಗೊತ್ತಿದೆ. ಕಾಂಗ್ರೆಸ್ನಲ್ಲಿ ಅಂಬೇಡ್ಕರ್ರನ್ನು ಸೋಲಿಸಿದ್ರಿ, ಬಾಬು ಜಗಜೀವನ್ ರಾಮ್ರನ್ನು ಸೋಲಿಸಿದ್ರಿ. ಈ ಜನ್ಮದಲ್ಲಿ ಸಿದ್ದರಾಮಯ್ಯ ಸಿಎಂ ಆಗಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದರು.
ಸಂಗಮೇಶ್ಗೆ 500 ಕೋಟಿ ರೂ. ಆಫರ್ ಮಾಡಿದ್ದೆ: ನಾನು ಭದ್ರಾವತಿ ಶಾಸಕ ಸಂಗಮೇಶ್ ಅವರಿಗೆ ಆಫರ್ ಮಾಡಿದ್ದು, 50 ಕೋಟಿ ಅಲ್ಲ 500 ಕೋಟಿ. ಭದ್ರಾವತಿ ಶಾಸಕ ಸಂಗಮೇಶ್ ಹುಟ್ಟಿದ ದಿನ ಅವರಿಗೆ ಬಿಜೆಪಿಯವರು ಪಕ್ಷಕ್ಕೆ ಬರಲು 50 ಕೋಟಿ ರೂ. ಆಮಿಷ ತೋರಿದ್ರು ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಕಾಂಗ್ರೆಸ್ ಮೇಲಿನ ಪ್ರೀತಿಯಿಂದ ಅವರು ಪಕ್ಷ ಬಿಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು. ಇದಕ್ಕೆ ಈಶ್ವರಪ್ಪನವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಕೆ.ಎಸ್.ಈಶ್ವರಪ್ಪ
ಸಿದ್ದರಾಮಯ್ಯನವರ ಭ್ರಷ್ಟಚಾರದ ಹಗರಣಗಳು ಒಂದೊಂದೇ ಹೊರಗೆ ಬರುತ್ತವೆ. ನಾವು ದಾಖಲೆ ಇಲ್ಲದೆ ಯಾವುದನ್ನು ಮಾತನಾಡಲ್ಲ. ನಮ್ಮ ಪಕ್ಷದ ಬೆಂಗಳೂರು ಅಧ್ಯಕ್ಷ ಎನ್.ಆರ್. ರಮೇಶ್ ಅವರು ಸಿದ್ದರಾಮಯ್ಯ 1.30 ಕೋಟಿ ರೂಪಾಯಿ ಲಂಚ ಪಡೆದಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ಹೇಳಿದರು.