ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣದ ಜವಾಬ್ದಾರಿಯನ್ನು ಸಿಎಂ ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೊರಬೇಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹುಣಸೋಡು ಗ್ರಾಮದಲ್ಲಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಶಿವಮೊಗ್ಗ ಸಿಎಂ ಯಡಿಯೂರಪ್ಪ ಅವರ ತವರು ಜಿಲ್ಲೆಯಾಗಿದ್ದು, ಈಶ್ವರಪ್ಪ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ದುರಂತದ ಹೊಣೆಯನ್ನು ಅವರು ಹೊತ್ತುಕೊಳ್ಳಬೇಕಿದೆ ಎಂದರು.
'ಆಡಳಿತ ಪಕ್ಷದ ಶಾಮೀಲು ಇಲ್ಲದೇ..'
ಹುಣಸೋಡು ಸ್ಫೋಟ ಪ್ರಕರಣದಲ್ಲಿ ಆರು ಜನ ಸಾವನ್ನಪ್ಪಿದ್ದಾರೆ. ಅವರ ಕುಟುಂಬದವರಿಗೆ ಮಾನವೀಯತೆಯ ಆಧಾರದಲ್ಲಿ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ ಅವರು, ಸ್ಫೋಟ ನಡೆದ ಅಕ್ಕಪಕ್ಕದ ಕ್ವಾರಿಗಳನ್ನು ಬಿಜೆಪಿ ಪಕ್ಷದವರೇ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದರು.
ಆಡಳಿತ ಪಕ್ಷದವರ ಶಾಮೀಲಿಲ್ಲದೆ ಇಷ್ಟೆಲ್ಲಾ ಅಕ್ರಮ ಕ್ವಾರಿಗಳು ನಡೆಯಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಅಕ್ರಮ ಕ್ವಾರಿ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ, ಇಷ್ಟು ದಿನ ಜಿಲ್ಲಾಡಳಿತ ನಿದ್ದೆಗೆ ಜಾರಿತ್ತೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
'ಸುಧಾಕರ್ ವಿರುದ್ಧ 302 ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿ'
ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸುಧಾಕರ್ ವಿರುದ್ಧ 302 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಈ ಪ್ರಕರಣವನ್ನು ಹೈಕೋರ್ಟ್ನ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಬೇಕು. ಆಗ ಮಾತ್ರ ಸತ್ಯಾಂಶ ಹೊರಗೆ ಬರುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗದೆ ಹೋದರೆ, ನ್ಯಾಯಯುತವಾದ ತನಿಖೆ ನಡೆಸದೆ ಹೋದರೆ, ಪ್ರಕರಣದ ನಿಜಾಂಶ ಹೊರಗೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.
'ಸದನದಲ್ಲಿ ಹುಣಸೋಡು ದುರಂತದ ಪ್ರಸ್ತಾಪ'
ಹುಣಸೋಡು ಸ್ಫೋಟ ಪ್ರಕರಣದ ಕುರಿತು ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಜಿಲ್ಲೆಯಲ್ಲಿ ಎಷ್ಟು ಬೇನಾಮಿ ಇದೆ ಎಂದು ತಿಳಿಯಬೇಕಾದರೆ ತನಿಖೆ ನಡೆಸಬೇಕು ಎಂದರು. ಸಚಿವ ಸುಧಾಕರ್ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ. ಆತನ ಮೇಲೆ ಎರಡು ಮೂರು ಕೇಸು ಹಾಕಿದ್ದಾರೆ. ಆದರೆ ಶಿಕ್ಷೆ ಆಗುವಂತೆ ಮಾಡಿಲ್ಲ ಎಂದರು. ರಾಜ್ಯ ಸರ್ಕಾರ ಸ್ಫೋಟದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದೆ. ಆದರೆ ಇದುವರೆಗೂ ಪರಿಹಾರ ನೀಡಿಲ್ಲ ಎಂದು ಕೂಡಾ ಈ ವೇಳೆ ಸಿದ್ದರಾಮಯ್ಯ ಆರೋಪಿಸಿದರು.