ಶಿವಮೊಗ್ಗ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಒಣಗಿದ ಮರ ಬಿದ್ದು ಐದು ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಚಿಪ್ಪಳಿ ಗ್ರಾಮದಲ್ಲಿ ನಡೆದಿದೆ.
ಸಾಗರ ತಾಲೂಕಿನ ಚಿಪ್ಪಳಿ ಗ್ರಾಮದ ಪ್ರತಿಕ್ಷಾ (5) ಸಾವನ್ನಪ್ಪಿದ ಬಾಲಕಿ ಎಂದು ಗುರುತಿಸಲಾಗಿದೆ. ಈಕೆ ಎಂದಿನಂತೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ರಸ್ತೆ ಪಕ್ಕದಲ್ಲಿದ್ದ ಒಣಗಿದ ಮರ ಪ್ರತಿಕ್ಷಾಳ ಮೇಲೆ ಬಿದ್ದಿದೆ. ಪರಿಣಾಮ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದಳು. ಕೂಡಲೇ ಸಾಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ವೇಳೆ ಸಾವನ್ನಪ್ಪಿದ್ದಾಳೆ ಎನ್ನಲಾಗುತ್ತಿದೆ.
ಪ್ರತಿಕ್ಷಾ ತಂದೆ ಕಳೆದ 6 ತಿಂಗಳ ಹಿಂದೆ ಸಾವನ್ನಪ್ಪಿದ್ದು, ತಾಯಿ ಪ್ರೇಮ ಮನೆ ಗೆಲಸ ಮಾಡಿಕೊಂಡು ಮೂವರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದರು. ಆದರೆ, ದುರ್ದೈವ ಪ್ರತಿಕ್ಷಾ ಸಹ ಸಾವನ್ನಪ್ಪಿದ್ದು, ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.
ಓದಿ: ಮಗುವಿನ ಶಿರಚ್ಛೇದನ ಮಾಡಿ ತಾನೂ ಪ್ರಾಣಬಿಟ್ಟ ಮಾನಸಿಕ ಅಸ್ವಸ್ಥ ತಾಯಿ
ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.