ಶಿವಮೊಗ್ಗ: ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲು ಗಣಿಗಾರಿಕೆ ಸ್ಫೋಟ ಪ್ರಕರಣದ ತನಿಖೆಗೆ ಆರು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಪೂರ್ವ ವಲಯ ಐಜಿಪಿ ಎಸ್ ರವಿ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಫೋಟ ಪ್ರಕರಣದ ತಬಿಖೆಗೆ ಸಿಪಿಐ ನೇತೃತ್ವದಲ್ಲಿ ಐದು ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡ ಸಮಗ್ರ ವರದಿಯನ್ನು ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸ್ಫೋಟ ಪ್ರಕರಣ ಸಂಬಂಧ ಅಕ್ರಮ ಸ್ಫೋಟಕ ದಾಸ್ತಾನು, ರವಾನೆ ಹಾಗೂ ಸ್ಫೋಟದ ಕುರಿತ ಪ್ರಕರಣ ದಾಖಲಿಸಲಾಗಿದೆ ಎಂದರು.
ಓದಿ...ಶಿವಮೊಗ್ಗ ಸ್ಫೋಟದಲ್ಲಿ ಮೃತಪಟ್ಟ ಐದು ಮಂದಿಯ ಗುರುತು ಪತ್ತೆ!
ಸದ್ಯ ಸ್ಫೋಟದಲ್ಲಿ ಒಟ್ಟು ಆರು ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಭದ್ರಾವತಿಯವರು ಹಾಗೂ ಮೂವರು ಆಂಧ್ರಪ್ರದೇಶದ ಆನಂತಪುರಂನವರು ಎಂದು ಗುರುತಿಸಲಾಗಿದೆ. ಇದರಲ್ಲಿ ಓರ್ವನ ಗುರುತು ಪತ್ತೆಯಾಗಿಲ್ಲ. ಈತನ ಗುರುತಿಸುವಿಕೆಯ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಸ್ಫೋಟವಾದ ಜಾಗದ ಸುತ್ತಮುತ್ತ ಹಲವು ಜಿಲೆಟಿನ್ಗಳು ಪತ್ತೆಯಾಗಿವೆ. ಪತ್ತೆ ಕಾರ್ಯ ಮುಂದುವರಿದಿದೆ. ಸ್ಫೋಟ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.