ಶಿವಮೊಗ್ಗ: ದೇಶದ ಪ್ರಪ್ರಥಮ ಕಾರ್ಮಿಕ ಸಂಘದ ಅಧ್ಯಕ್ಷೆಯಾಗಿದ್ದ ಭದ್ರಾವತಿಯ ರಾಜಮ್ಮ(87) ನಿಧನರಾಗಿದ್ದಾರೆ. 1982ರಲ್ಲಿ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷೆಯಾಗಿ ಇವರು ಕಾರ್ಯ ನಿರ್ವಹಿಸಿದ್ದರು. ಕಾರ್ಮಿಕರ ಪರವಾಗಿ ನಿರಂತರ ಹೋರಾಟ ನಡೆಸಿ 10 ಸಾವಿರ ಖಾಯಂ ಹಾಗೂ 3 ಸಾವಿರ ಗುತ್ತಿಗೆ ಕಾರ್ಮಿಕರ ಧ್ವನಿಯಾಗಿ ಸರಿಯಾದ ಸಮಯಕ್ಕೆ ಸಿಗಬೇಕಾದ ಸೌಲಭ್ಯವನ್ನು ಇವರು ಕೊಡಿಸಿದ್ದರು ಅನ್ನೋದು ಇಲ್ಲಿ ಸ್ಮರಣಾರ್ಹ.
ರಾಜಮ್ಮ ಅವಿವಾಹಿತರಾಗಿದ್ದರು. ಇವರು ಐದು ಜನ ಸಹೋದರಿಯರು ಹಾಗೂ 6 ಮಂದಿ ಸಹೋದರರನ್ನು ಅಗಲಿದ್ದಾರೆ. ಓರ್ವ ಕಾರ್ಮಿಕೆಯಾಗಿ ವಿಐಎಸ್ಎಲ್ ಸೇರಿ, ಕಾರ್ಮಿಕ ಸಂಘದ ಅಧ್ಯಕ್ಷೆಯಾಗಿ ಸಲ್ಲಿಸಿದ ಸೇವೆಯನ್ನು ಮರೆಯುವಂತಿಲ್ಲ.
ಸಂತಾಪ: ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷರಾದ ಚಂದ್ರಹಾಸ್, ನರಸಿಂಹಾಚಾರ್ ಸೇರಿದಂತೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಸಂತಾಪ ಸಭೆ ನಡೆಸಿ, ಆತ್ಮಕ್ಕೆ ಶಾಂತಿ ಕೋರಿದ್ದಾರೆ.