ಶಿವಮೊಗ್ಗ: ಮಧ್ಯ ಕರ್ನಾಟಕದಲ್ಲಿ ಪ್ರಥಮ ಭಾರಿಗೆ ಹುಟ್ಟಿನಿಂದಲೇ ಬರುವ ಕಿವುಡುತನಕ್ಕೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ಐದಾರು ಜಿಲ್ಲೆಗಳಲ್ಲಿ ಉತ್ತಮ ಸೇವೆ ಒದಗಿಸುತ್ತಿರುವ ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನ ಬೋಧನಾಸ್ಪತ್ರೆಯಾದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಹುಟ್ಟಿನಿಂದಲೇ ಬರುವ ಕಿವುಡುತನಕ್ಕೆ ಅತ್ಯಾಧುನಿಕ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಇದೀಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ.
ಹುಟ್ಟಿನಿಂದಲೇ ಸಂಪೂರ್ಣ ಕಿವುಡಾದ ಮಕ್ಕಳಿಗೆ ಶ್ರವಣ ಸಾಧನಗಳು ಉಪಯೋಗಕ್ಕೆ ಬರುವುದಿಲ್ಲ. ಇಂತಹ ಮಕ್ಕಳಿಗೆ ವರದಾನವಾಗಿ ಕಾಕ್ಲಿಯರ್ ಇಂಪ್ಲಾಂಟ್ ಮಾಡಲಾಗುತ್ತದೆ. ಈ ಶಸ್ತ್ರಚಿಕಿತ್ಸೆ ದುಬಾರಿ. ಆದ್ದರಿಂದ ರಾಜ್ಯ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯಡಿ ಈ ಚಿಕಿತ್ಸೆಯನ್ನೂ ಸೇರಿಸಿದ್ದು, ಇದನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುತ್ತಿದೆ. ಪ್ರತಿ ಸಾವಿರ ಜನನ ಪ್ರಮಾಣಕ್ಕೆ ಎರಡು ಮಕ್ಕಳಿಗೆ ಹುಟ್ಟುವಾಗಲೇ ಕಿವುಡುತನ ಬಂದಿರುತ್ತದೆ.
ಇದರಲ್ಲಿ ಒಂದು ಮಗುವಿನ ಕಿವುಡುತನ ಅಲ್ಪ ಪ್ರಮಾಣದಲ್ಲಿದ್ದು, ಅದನ್ನು ವಿವಿಧ ಸುಲಭ ಚಿಕಿತ್ಸೆ, ಹಿಯರಿಂಗ್ ಏಡ್ ಅಥವಾ ಶ್ರವಣ ಸಾಧನಗಳನ್ನು ಬಳಸಿ ಪುನಶ್ಚೇತನಗೊಳಿಸಬಹುದು. ಆದರೆ ಹುಟ್ಟುವಾಗಲೇ ಸಂಪೂರ್ಣ ಕಿವುಡುತನ ಇರುವ ಮಕ್ಕಳಿಗೆ ಕಿವಿಯ ಒಳಗಡೆ ಇರುವ ಶ್ರವಣಕ್ಕೆ ಸಂಬಂಧಿಸಿದ ನರಗಳು ಕೆಲಸ ಮಾಡುವುದಿಲ್ಲ. ಆದ್ದರಿಂದ ಇಂತಹ ಮಕ್ಕಳಿಗೆ ಶ್ರವಣ ಸಾಧನ ಕೆಲಸ ಮಾಡುವುದಿಲ್ಲ. ಕಳೆದ 50 ರಿಂದ 60 ವರ್ಷಗಳಿಂದ ಇದರ ಬಗ್ಗೆ ನಿರಂತರವಾಗಿ ಸಂಶೋಧನೆಗಳು ನಡೆದಿದ್ದರೂ ಸಹ ಕಳೆದ 15 ವರ್ಷಗಳಿಂದ ಇದು ಚೆನ್ನಾಗಿ ಅಭಿವೃದ್ಧಿಯಾಗಿದೆ. ಭಾರತದಲ್ಲಿ ಕಳೆದ 10 ವರ್ಷಗಳಿಂದ ಈ ಚಿಕಿತ್ಸೆ ಜನಪ್ರಿಯವಾಗಿದೆ.
ಕಾಕ್ಲಿಯರ್ ಚಿಕಿತ್ಸೆ ದುಬಾರಿ: ಕಾಕ್ಲಿಯರ್ ಶಸ್ತ್ರಚಿಕಿತ್ಸೆಗೆ ಸುಮಾರು 10 ರಿಂದ 12 ಲಕ್ಷ ರೂ ಖರ್ಚಾಗುತ್ತದೆ. ಎಲ್ಲರಿಗೂ ಇದನ್ನು ಭರಿಸಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ಎಡಿಐಪಿ ಯೋಜನೆಯಡಿ ಇದರ ವೆಚ್ಚ ಭರಿಸುತ್ತಿದ್ದರೂ ಹೆಚ್ಚಿನ ಪ್ರಮಾಣದ ಅನುದಾನ ದೊರೆಯುತ್ತಿರಲಿಲ್ಲ. ಈಗ ರಾಷ್ಟ್ರೀಯ ಕಿವುಡುತನ ನಿರ್ಮೂಲನಾ ಮತ್ತು ನಿಯಂತ್ರಣ ಯೋಜನೆಯಡಿ ಅರಿವು ಮೂಡಿಸಲಾಗುತ್ತಿದೆ. ಈ ಯೋಜನೆಯಡಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವಾಕ್ ಶ್ರವಣ ಕೇಂದ್ರ ಪ್ರಾರಂಭಿಸಲಾಗಿದೆ. ಹುಟ್ಟುವ ಎಲ್ಲಾ ಮಕ್ಕಳಿಗೆ ಅತ್ಯಾಧುನಿಕ ತಂತ್ರಜ್ಞಾನದಿಂದ ಕಿವುಡುತನ ತಪಾಸಣೆ ಮಾಡಲಾಗುತ್ತಿದೆ.
ಈ ವರ್ಷ ರಾಜ್ಯದಲ್ಲಿ 500 ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಮಾಡುವ ಗುರಿ ಹೊಂದಲಾಗಿದೆ. ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಮುಂಚಿನ ತಪಾಸಣೆ, ಕಾಕ್ಲಿಯರ್ ಇಂಪ್ಲಾಂಟ್ ಸಾಧನ, ಶಸ್ತ್ರಚಿಕಿತ್ಸೆ ಮತ್ತು ನಂತರದ ವಾಕ್‍ಶ್ರವಣ ಪುನಶ್ಚೇತನ ಚಿಕಿತ್ಸೆ ಇವೆಲ್ಲವೂ ಉಚಿತ. ವಾಕ್‍ಶ್ರವಣ ಪುನಶ್ಚೇತನ ಚಿಕಿತ್ಸೆ ಕ್ಲಿಷ್ಟಕರವಾಗಿದ್ದು 8 ರಿಂದ 10 ತಿಂಗಳು ಹಿಡಿಯುತ್ತದೆ. ಶಸ್ತ್ರಚಿಕಿತ್ಸೆಯಾದ ನಂತರ ಕಾಕ್ಲಿಯರ್ ಇಂಪ್ಲಾಂಟ್ ಆದ ಮೇಲೆ ಯಂತ್ರದ ಸಿಗ್ನಲ್ಗಳು ಸರಿಯಾಗಿ ಬರುತ್ತಿವೆಯೇ ಎಂದು ಪರೀಕ್ಷಿಸಿ, ಶಸ್ತ್ರಚಿಕಿತ್ಸೆಯಾದವರಿಗೆ ಹಾಗೂ ಅವರ ಪೋಷಕರಿಗೆ ತರಬೇತಿ ನೀಡಬೇಕಾಗುತ್ತದೆ. ಇದರಿಂದ ಇದು ಸಮಯ ತೆಗೆದುಕೊಳ್ಳುತ್ತದೆ. ಮೆಗ್ಗಾನ್ ಆಸ್ಪತ್ರೆಗೆ ಕೇಂದ್ರ ಸರ್ಕಾರದ ಯೋಜನೆಯಡಿ ಈಗ ಅನುದಾನ ಹಾಗೂ ಶಸ್ತ್ರಚಿಕಿತ್ಸೆಗೆ ಬೇಕಾದ ಯಂತ್ರೋಪಕರಣಗಳು ಬಂದಿರುವುದರಿಂದ ಶಸ್ತ್ರಚಿಕಿತ್ಸೆ ಪ್ರಾರಂಭಿಸಲಾಗಿದೆ.
ಮೆಗ್ಗಾನ್ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿತ್ಸೆಯಾದ ಕಾರಣ ಮೊದಲ ಮಗುವಿಗೆ ರಾಜ್ಯದ ಖ್ಯಾತ ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಮತ್ತು ಕಿವಿ ಮೂಗು ಗಂಟಲು ತಜ್ಞರ ರಾಷ್ಟ್ರೀಯ ಅಧ್ಯಕ್ಷರಾಗಿರುವ ಬೆಂಗಳೂರಿನ ಡಾ.ಶಂಕರ್ ಮಡಿಕೇರಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಜೊತೆಗೆ ಆಸ್ಪತ್ರೆಯ ವೈದ್ಯರಿಗೆ ಹೇಗೆ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೇ ಜಿಲ್ಲೆಯ ಎಲ್ಲಾ ಕಿವಿ, ಮೂಗು ಹಾಗೂ ಗಂಟಲು ವೈದ್ಯರಿಗೆ ಇದರ ವಿಡಿಯೋ ಸಹ ತೋರಿಸಿದ್ದಾರೆ.
5 ವರ್ಷದೊಳಗಿನ ಮಕ್ಕಳಿಗೆ ಶಸ್ತ್ರಚಿಕಿತ್ಸೆ: "ಈ ಚಿಕಿತ್ಸೆಯನ್ನು ಮಗುವಿನ ಮೂರನೇ ವರ್ಷದ ಒಳಗೆ ನಡೆಸಬೇಕು. ಆದರೆ ಕೇಂದ್ರ ಸರ್ಕಾರ ಈಗ ಮಗುವಿಗೆ ಐದು ವರ್ಷದ ಒಳಗೆ ಚಿಕಿತ್ಸೆ ಒದಗಿಸಲು ಅವಕಾಶ ನೀಡಿದೆ. ಇದರಿಂದ ಶಿಕಾರಿಪುರ ತಾಲೂಕಿನ ನರಸಪುರ ಗ್ರಾಮದ ಬಾಲಕಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಗುವಿನ ಮೆದುಳಿನಲ್ಲಿನ ಶ್ರವಣ ನರದ ಜೊತೆ ಇದನ್ನು ಸೇರಿಸಲಾಗುತ್ತದೆ. ಯಂತ್ರ ಸಿಗ್ನಲ್ ಸರಿಯಾಗಿ ನೀಡಿದ ನಂತರವೇ ಶಸ್ತ್ರಚಿಕಿತ್ಸೆ ಯಶಸ್ವಿ ಎಂದು ಹೇಳಬಹುದಾಗಿದೆ. ಇದು ದುಬಾರಿ ಶಸ್ತ್ರಚಿಕಿತ್ಸೆಯಾಗಿದ್ರೂ ಸಹ ಸರ್ಕಾರ ಈ ಯೋಜನೆಯನ್ನು ಆಯುಷ್ಮಾನ್ ಭಾರತ ಜೊತೆ ಜೋಡಿಸಿರುವುದು ಸಂತಸ ತಂದಿದೆ. ಹುಟ್ಟಿನಿಂದಲೇ ಕಿವುಡುತನ ಅನುಭವಿಸುವವರಿಗೆ ಚಿಕಿತ್ಸೆ ಮೂಲಕ ಇತರೆ ಮಕ್ಕಳಂತೆ ಶಾಲೆಗೆ ಕಳುಹಿಸುವುದೇ ನಮ್ಮ ಮುಖ್ಯ ಉದ್ದೇಶ" ಎನ್ನುತ್ತಾರೆ ಡಾ.ಶಂಕರ್ ಮಡಿಕೇರಿ.
ಅನೇಕ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ಮತ್ತು ಅನೇಕ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಶಸ್ತ್ರಚಿಕಿತ್ಸೆಯ ಅವಕಾಶ ಹೆಮ್ಮೆಯ ಗರಿಯಾಗಿದೆ. ಹಾಲಿ ನಮ್ಮ ಆಸ್ಪತ್ರೆಯಲ್ಲಿ ಇನ್ನೂ ಐದು ಮಕ್ಕಳು ಶಸ್ತ್ರ ಚಿಕಿತ್ಸೆಗೆ ಇದ್ದಾರೆ. ಮುಂದೆ ಇಂತಹ ಆಪರೇಷನ್ ಹೆಚ್ಚಾಗಬಹುದು. ಈಗ ಡಾ.ಶಂಕರ್ ಮಡಿಕೇರಿ ಅವರು ನಮಗೆಲ್ಲಾ ಶಸ್ತ್ರಚಿಕಿತ್ಸೆಯ ಬಗ್ಗೆ ತಿಳಿಸಿದ್ದಾರೆ. ಮುಂದೆ ಅವರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತೇವೆ ಎಂದು ಕಿವಿ, ಮೂಗು ಹಾಗೂ ಗಂಟಲು ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಗಂಗಾಧರ್ ತಮ್ಮ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಶಸ್ತ್ರಚಿಕಿತ್ಸೆಗೆೊಳಗಾದ ಬಾಲಕಿಯ ತಂದೆ ಬಾನಪ್ಪ ಈಟಿವಿ ಭಾರತ ಜೊತೆ ಮಾತನಾಡಿ, "ನಮಗೆ ಹುಟ್ಟಿದ ಮಗು ಕಿವುಡುತನ ಅನುಭವಿಸುತ್ತಿರುವ ಕುರಿತು ನಮಗೆ ಬೇಸರವಿತ್ತು. ದಾವಣಗೆರೆ ಸೇರಿದಂತೆ ಎಲ್ಲಾ ಕಡೆ ತೋರಿಸಿದ್ದೆವು, ಆದರೆ ಪ್ರಯೋಜನವಾಗಲಿಲ್ಲ. ಕೊನೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಸರ್ಕಾರ ಯೋಜನೆಯಡಿ ನಡೆಸುತ್ತಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದರಿಂದ ನಮ್ಮ ಕುಟುಂಬಕ್ಕೆ ತುಂಬ ಸಂತವಾಗಿದೆ" ಎಂದು ತಿಳಿಸಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನು ಫೆ.25 ರ ವಿಶ್ವ ಕಾಕ್ಲಿಯರ್ ಇಂಪ್ಲಾಂಟ್ ಡೇ ಹಾಗೂ ಮಾರ್ಚ್ 3ರ ವರ್ಲ್ಡ್ ಹಿಯರಿಂಗ್ ಡೇಗಾಗಿ ನಡೆಸಲಾಗಿದೆ.
ಇದನ್ನೂ ಓದಿ: ಮಹಿಳೆಗೆ ಅಪರೂಪದ ಖಾಯಿಲೆ: ಕಿಮ್ಸ್ ವೈದ್ಯರಿಂದ ಮರುಜೀವ- ವಿಡಿಯೋ