ಶಿವಮೊಗ್ಗ : ಸೋಗಾನೆ ಗ್ರಾಮದ ಬಳಿ ನಿರ್ಮಾಣವಾಗಿರುವ ಕುವೆಂಪು ವಿಮಾನ ನಿಲ್ದಾಣಕ್ಕೆ ಗುರುವಾರ ಪ್ರಥಮ ಬಾರಿಗೆ ನಾಗರಿಕ ವಿಮಾನ ಬಂದಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಾಂಪ್ರದಾಯಿಕವಾಗಿ ವಾಟರ್ ಸೆಲ್ಯೂಟ್ ನೀಡಿ ವಿಮಾನವನ್ನು ಸ್ವಾಗತಿಸಲಾಯಿತು.
ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನ 6E 77312 ವಿಮಾನ ಹೊರಟು ಕುವೆಂಪು ವಿಮಾನ ನಿಲ್ದಾಣಕ್ಕೆ ಬೆ. 10:40 ಕ್ಕೆ ಆಗಮಿಸಿತು. ಶಿವಮೊಗ್ಗಕ್ಕೆ ಬಂದ ವಿಮಾನದಲ್ಲಿ ಸುಮಾರು 70 ಜನರನ್ನು ಕರೆ ತರಲಾಯಿತು. ವಿಮಾನದಿಂದ ಎಲ್ಲಾ ಪ್ರಯಾಣಿಕರನ್ನು ಇಂಡಿಗೋ ಬಸ್ನಲ್ಲಿ ಟರ್ಮಿನಲ್ ತನಕ ಕರೆ ತರಲಾಯಿತು. ಟರ್ಮಿನಲ್ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ವಿಮಾನ ನಿಲ್ದಾಣದ ನಿರ್ದೇಶಕರು ಸೇರಿದಂತೆ ಸಿಬ್ಬಂದಿಗಳು ಪ್ರಯಾಣಿಕರಿಗೆ ಹೂಗೂಚ್ಛ ನೀಡಿ ಸ್ವಾಗತ ಕೋರಿದರು.
ಟರ್ಮಿನಲ್ ಒಳಗೆ ಬಂದ ಪ್ರಯಾಣಿಕರಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮೊದಲಿಗರಾಗಿದ್ದು ವಿಶೇಷವಾಗಿತ್ತು. ನಂತರ ಆರಗ ಜ್ಞಾನೇಂದ್ರ ಆಗಮಿಸಿದರು. ಇವರ ಜೊತೆಗೆ ಸಚಿವ ಎಂ ಬಿ ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಸೇರಿದಂತೆ ಶಿವಮೊಗ್ಗ ಜಿಲ್ಲಾ ಕೈಗಾರಿಕ ಹಾಗೂ ವಾಣಿಜ್ಯ ಸಂಸ್ಥೆಯ ನಿರ್ದೇಶಕರುಗಳು ಸೇರಿದಂತೆ ಅನೇಕರು ಅಗಮಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣದ ಅಧಿಕೃತ ವೆನ್ ಸೈಟ್ಗೆ ಸಚಿವ ಎಂ ಬಿ ಪಾಟೀಲ್ ಸೇರಿದಂತೆ ಗಣ್ಯರು ಚಾಲನೆ ನೀಡಿದರು.
ಬಿಎಸ್ವೈ ಅವರಿಗೆ ಅಭಿನಂದನೆಗಳು : ನಂತರ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ಇಂದು ಮೊದಲ ವಿಮಾನ ಬಂದು ಲ್ಯಾಂಡಿಂಗ್ ಮಾಡಿದೆ. 220 ಕೋಟಿ ವೆಚ್ಚದ ಉದ್ದೇಶಿತ ಎಟಿಆರ್ ವಿಮಾನ ನಿಲ್ದಾಣವನ್ನು 450 ಕೋಟಿ ರೂ.ಗೆ ಹೆಚ್ಚಿಸಿ ನೈಟ್ ಲ್ಯಾಂಡಿಂಗ್ ಅವಕಾಶ ಇರುವ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರಣರಾದ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದರು. ಏರ್ಪೋರ್ಟ್ ಪಕ್ಕದಲ್ಲಿ ಕೈಗಾರಿಕಾ ಪ್ರದೇಶ ಇರುವುದರಿಂದ ಮುಂದಿನ ದಿನಗಳಲ್ಲಿ ಕೈಗಾರಿಕೆಗಳಿಗೆ ಅನುಕೂಲಕರವಾಗಲಿದೆ. ಇಲ್ಲಿ ಅಗತ್ಯ ಬಿದ್ದರೆ ಕೈಗಾರಿಕ ಪ್ರದೇಶವನ್ನು ವಿಸ್ತರಿಸಲಾಗುವುದು. ನಂತರ ರಾಜ್ಯ ಸರ್ಕಾರದಿಂದ ಉಡಾನ್ ಯೋಜನೆಯಡಿ ಪ್ರತಿ ಪ್ರಯಾಣಿಕರಿಗೆ 500 ರೂ. ಸಬ್ಸಿಡಿ ನೀಡಲಾಗುವುದು ಎಂದರು.
ರಾಜ್ಯ ಸರ್ಕಾರದಿಂದ ನಿರ್ವಹಣೆ ಮಾಡುವ ಮೊದಲ ವಿಮಾನ ನಿಲ್ದಾಣ ಇದಾಗಿದೆ. ಹಿಂದೆಲ್ಲಾ ನಾವು ನಮ್ಮ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿ, ಏರ್ಪೋರ್ಟ್ ಅಥಾರಿಟಿ ಅವರಿಗೆ ಎಲ್ಲವನ್ನು ಬಿಟ್ಟುಕೊಡಬೇಕಿತ್ತು. ನಮ್ಮ ಜಾಗ ಹಾಗೂ ಕಟ್ಟಡವನ್ನು ಅವರಿಗೆ ಬಿಟ್ಟು ಕೊಡಬೇಕಿತ್ತು. ಈಗ ಶಿವಮೊಗ್ಗದ ಜೊತೆಗೆ ಬಳ್ಳಾರಿ ಹಾಗೂ ರಾಯಚೂರು ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನಿರ್ವಹಣೆ ಮಾಡಲಿದೆ ಎಂದರು. ಶಿವಮೊಗ್ಗ ಜಿಲ್ಲೆಗೆ ವಿಮಾನ ಹಾರಾಟದಿಂದ ಜಿಲ್ಲೆಗೆ ಉತ್ತಮವಾದ ವಾತಾವರಣ ಸೃಷ್ಟಿ ಆಗಲಿದೆ. ಜಿಲ್ಲೆಯ ಬೆಳವಣಿಗೆಗೆ ಸಹಕಾರವಾಗಲಿದೆ ಎಂದು ಹೇಳಿದರು.
ನಮ್ಮೆರಲ್ಲ ಕನಸು ವಿಮಾನ ನಿಲ್ದಾಣವಾಗಿದೆ : ನಂತರ ಮಾತನಾಡಿದ ಬಿಎಸ್ವೈ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆಗಿರುವುದಕ್ಕೆ ಈ ಭಾಗದ ರೈತ ಸಮುದಾಯ ಮಾಡಿ ತ್ಯಾಗ, ಕೊಟ್ಟಂತ ಭೂಮಿನಿಂದ ಸಾಧ್ಯವಾಗಿದೆ. ಕೊಡದಿದ್ದರೇ ಇಷ್ಟು ಬೇಗ ವಿಮಾನ ನಿಲ್ದಾಣವನ್ನು ಮಾಡಲು ಆಗುತ್ತಿರಲಿಲ್ಲ. ಇದಕ್ಕಾಗಿ ರೈತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಕೈಗಾರಿಕೆ ಬರೋದ್ದರಲ್ಲಿಯೂ ಸಂಶಯವಿಲ್ಲ. ರಾತ್ರಿ ಲ್ಯಾಂಡಿಂಗ್ ಕೂಡ ಆರಂಭವಾಗಲಿದೆ. ವಿಮಾನ ಹಾರಾಟ ಮಾಡಬೇಕೆಂದು ಬಹಳ ವರ್ಷಗಳಿಂದ ನಮ್ಮೆರಲ್ಲ ಕನಸಾಗಿತ್ತು. ನಿಮ್ಮೆಲ್ಲರ ಆಶೀರ್ವಾದಿಂದ ವಿಮಾನ ನಿಲ್ದಾಣವಾಗಿದೆ ಎಂದರು.
ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲೆಯ ಇತಿಹಾಸ ಪುಟದಲ್ಲಿ ಇಂದು ಸೇರ್ಪಡೆ ಆಗಲಿದೆ. ವಿಮಾನ ನಿಲ್ದಾಣಕ್ಕೆ ಶ್ರಮಿಸಿದ ಎಲ್ಲಾರಿಗೂ ಮತ್ತು ವಿಶೇಷವಾಗಿ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಅಭಿನಂದನೆಗಳು ಎಂದರು. ವಿಮಾನ ನಿಲ್ದಾಣವು ಜನ ಸಾಮಾನ್ಯರ ಉಪಯೋಗಕ್ಕೆ ಬರುವಂತಾಗಬೇಕು. ಇದಕ್ಕಾಗಿ ನಾನು ಜನಪ್ರತಿನಿಧಿಗಳ ಸಹಕಾರ ಕೋರುತ್ತೇನೆ. ಕೈಗಾರಿಕೋದ್ಯಮಿಗಳ ಜೊತೆಗೆ ಬಡವರು ಸಹ ವಿಮಾನದಲ್ಲಿ ಹಾರಾಟ ಮಾಡುವಂತಾಗಬೇಕು. ಎಲ್ಲಾರಿಗೂ ಶುಭ ಕೋರುತ್ತೇವೆ. ಅಧಿಕಾರಿಗಳು ಎಲ್ಲರೊಂದಿಗೆ ಸಹಕರಿಸಿ. ವಿಶೇಷವಾಗಿ ವಿಮಾನ ನಿಲ್ದಾಣಕ್ಖೆ ಭೂಮಿ ನೀಡಿದವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಇವತ್ತು ಐತಿಹಾಸಿಕ ದಿನ. ಅಧಿಕೃತವಾಗಿ ಶ್ರಾವಣ ಮಾಸದಲ್ಲಿ ಮಧ್ಯ ಕರ್ನಾಟಕ ಶಿವಮೊಗ್ಗಕ್ಕೆ ಮೊದಲ ಲೋಹದ ಹಕ್ಕಿಯ ಆಗಮನವಾಗಿದೆ. ಇದಕ್ಕೆ ಕಾರಣೀಕರ್ತರಾದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ಮುಂದೆ ಕೈಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಸಹಾಯಕವಾಗಲಿದೆ. ಶಿವಮೊಗ್ಗ ಬೆಂಗಳೂರು ನಡುವೆ ಉಡಾನ್ ಯೋಜನೆ ಬಂದಿಲ್ಲ. ನಂತರ ಉಡಾನ್ ಯೋಜನೆ ಜಾರಿ ಆಗಲಿದೆ ಎಂದು ಮಾಹಿತಿ ನೀಡಿದರು.
ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ಸನ್ಮಾನ ಮಾಡಲು ಮುಂದಾದಾಗ ಹಾಪ್ ಕಾಮ್ಸ್ ನ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಅವರು, ನೀವು ನಿಜವಾದ ರೈತರಿಗೆ ಸನ್ಮಾನ ಮಾಡಿ, ಬಿಜೆಪಿ ಕಾರ್ಯಕರ್ತರಿಗೆ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು. ನಂತರ ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಸಚಿವ ಎಂ ಬಿ ಪಾಟೀಲ್ ಹಾಗೂ ಮಧು ಬಂಗಾರಪ್ಪನವರು ವಾಪಸ್ ಆದರು.
ಇದನ್ನೂ ಓದಿ : ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ: ವಿಮಾನ ಹತ್ತಿ ಸಂತಸಪಟ್ಟ ಬಿಎಸ್ವೈ, ಪಾಟೀಲ್, ಈಶ್ವರಪ್ಪ