ಶಿವಮೊಗ್ಗ: ಒಣಗಿಸಲು ಹಾಕಿದ್ದ ಜೋಳದ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಜೋಳ ಬೆಂಕಿಗಾಹುತಿಯಾಗಿದೆ. ಈ ಘಟನೆ ಇಲ್ಲಿನ ಮಲವಗೊಪ್ಪದಲ್ಲಿ ನಡೆದಿದೆ.
ಮಲವಗೊಪ್ಪದ ಠಕಾರ ನಾಯ್ಕ ಹಾಗೂ ಅವರ ಸಹೋದರರಿಗೆ ಸೇರಿದ ಮೆಕ್ಕೆಜೋಳವನ್ನು ಕಟಾವು ಮಾಡಿ ತಮ್ಮದೇ ಜಮೀನಿನಲ್ಲಿ ಬಣವೆ ಹಾಕಲಾಗಿತ್ತು. ಇಂದು ಬೆಳಗ್ಗಿನ ಜಾವ ಗ್ರಾಮದವರು ಜಮೀನಿನ ಕಡೆ ಬಂದಾಗ ಬೆಂಕಿ ಹಚ್ಚಿರುವುದು ಗೊತ್ತಾಗಿದೆ. ತಕ್ಷಣ ಪಕ್ಕದ ಪಂಪ್ ಸೆಟ್ನಿಂದ ನೀರು ತಂದು ಸುರಿದು ಬೆಂಕಿ ನಂದಿಸಲಾಗಿದೆ. ಕಳೆದ 6 ತಿಂಗಳ ಹಿಂದೆ ಜೋಳವನ್ನು ಕಟಾವು ಮಾಡಿದ್ದು ಸೂಕ್ತ ದರ ಸಿಗದ ಕಾರಣ ಅದನ್ನು ಅಲ್ಲಿಯೇ ದಾಸ್ತಾನು ಇಡಲಾಗಿತ್ತು.
ಸಾಲ ಮಾಡಿ ಜೋಳ ಬೆಳೆದಿದ್ದ ಸಹೋದರರು ಕಿಡಿಗೇಡಿಗಳ ಕುಕೃತ್ಯದಿಂದ ಸಂಕಷ್ಟಕ್ಕೀಡಾಗಿದ್ದು ಆರ್ಥಿಕ ಸಹಕಾರದ ನಿರೀಕ್ಷೆಯಲ್ಲಿದ್ದಾರೆ.