ಶಿವಮೊಗ್ಗ: ಶ್ರೀಗಂಧ ಮರಗಳ್ಳರು ಹೊಸನಗರ ತಾಲೂಕಿನ ನಗರ ಅರಣ್ಯ ವಲಯದ ಡಿಆರ್ಎಫ್ಒ ಗೋವಿಂದ ರಾಜ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ನಗರ ಹೋಬಳಿಯ ಹೆಗ್ಗರಸು ಗ್ರಾಮದ ಬಳಿ ಅರಣ್ಯದಲ್ಲಿ ಶ್ರೀಗಂಧ ಮರ ಕಡಿದು ಸಾಗಾಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಡಿಆರ್ಎಫ್ಒ ಗೋವಿಂದ ರಾಜ್ ದಾಳಿ ನಡೆಸಿದ್ದರು.
ಈ ವೇಳೆ ಶ್ರೀಗಂಧ ಕಳ್ಳರಾದ ಕುಮಾರ್, ಮೋಹನ್ ಸೇರಿ ಐವರ ತಂಡ ಮಚ್ಚು ಹಾಗೂ ಮರದ ತುಂಡಿನಿಂದ ಹಲ್ಲೆ ನಡೆಸಿದೆ ಎನ್ನಲಾಗಿದೆ. ಇದರಿಂದ ಗೋವಿಂದ ರಾಜ್ ತಲೆ, ಬೆನ್ನಿಗೆ ತೀವ್ರ ಗಾಯಗಳಾಗಿವೆ. ಹಲ್ಲೆ ತಡೆಯಲು ಬಂದ ಗೋವಿಂದ ರಾಜ್ ಜೀಪ್ ಡ್ರೈವರ್ ಸುಬ್ಬಣ್ಣ ಮೇಲೂ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ.
ಗಾಯಗೊಂಡ ಗೋವಿಂದ ರಾಜ್ ಅವರನ್ನ ಹೊಸನಗರ ಸರ್ಕಾರಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.