ಶಿವಮೊಗ್ಗ: ಭದ್ರಾ ಡ್ಯಾಂನಿಂದ ಸತತ ನೂರು ದಿನ ನೀರು ಹರಿಸುವುದನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿ ರೈತರು ಶಿವಮೊಗ್ಗದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಮಳೆ ಕೊರತೆಯಿಂದ ಭದ್ರಾ ಅಣೆಕಟ್ಟು ಈ ಬಾರಿ ಕೇವಲ 156 ಅಡಿ ಮಾತ್ರ ಭರ್ತಿಯಾಗಿತ್ತು. ಡ್ಯಾಂನಲ್ಲಿ ಒಟ್ಟು 186 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಬಾರಿ ಶೇ 45 ರಷ್ಟು ಮಾತ್ರ ಅಣೆಕಟ್ಟು ತುಂಬಿದೆ. ಆದರೆ, ಕಾಡಾದ ಅಧಿಕಾರಿಗಳು, ಸಚಿವರು ಇಷ್ಟು ಕಡಿಮೆ ನೀರು ಇರುವ ಸಂದರ್ಭದಲ್ಲಿ ಡ್ಯಾಂನಿಂದ ಸತತ ನೂರು ದಿನ ನೀರು ಹರಿಸುವ ತೀರ್ಮಾನ ತೆಗೆದುಕೊಂಡಿತ್ತು. ಇದಕ್ಕೆ ಭದ್ರಾವತಿ, ಶಿವಮೊಗ್ಗ ಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಣೆಕಟ್ಟೆಯಲ್ಲಿ ನೀರು ಕಡಿಮೆ ಇರುವುದರಿಂದ ಸತತ ನೀರು ಹರಿಸುವಿಕೆ ತಡೆಯಬೇಕೆಂದು ಆಗ್ರಹಿಸಿ ಭದ್ರಾ ಡ್ಯಾಂನ ಮುಖ್ಯ ಎಂಜಿನಿಯರ್ ಕಚೇರಿ ಮುಂಭಾಗ ಕಳೆದ ನಾಲ್ಕೈದು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಅದರಂತೆ ದಾವಣಗೆರೆ ಜಿಲ್ಲೆಯಲ್ಲಿ ಸತತ ನೂರು ದಿನ ನೀರು ಹರಿಸಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.
ಕಾಡಾ ಕಚೇರಿಯಲ್ಲಿ ನೀರು ಹರಿಸುವ ಕುರಿತು ಸಭೆ: ಭದ್ರಾ ಅಣೆಕಟ್ಟೆಯಿಂದ ನೀರು ಹರಿಸುವಿಕೆಯ ಕುರಿತು ಉಂಟಾಗಿರುವ ಗೊಂದಲ, ಮಳೆಯ ಕೊರತೆ ಹಿನ್ನಲೆಯಲ್ಲಿ ಇಂದು (ಬುಧವಾರ) ಶಿವಮೊಗ್ಗದ ಕಾಡಾ ಕಚೇರಿಯಲ್ಲಿ ಸಭೆ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಡಿಸಿ ಸೆಲ್ವಮಣಿ, ದಾವಣಗೆರೆ ಡಿಸಿ ಸೇರಿದಂತೆ ಕಾಡಾದ ಅಧಿಕಾರಿಗಳು ಡ್ಯಾಂನಲ್ಲಿ ಇರುವ ನೀರು, ಒಳ ಹರಿವು ಸೇರಿದಂತೆ ಎಲ್ಲದರ ಕುರಿತು ಸಭೆ ನಡೆಸುತ್ತಿದ್ದಾರೆ.
ಇದೇ ರೀತಿ ನಿರಂತರವಾಗಿ ನೀರು ಹರಿಸಿದರೆ, ಭದ್ರಾ ಡ್ಯಾಂ ಖಾಲಿಯಾಗುತ್ತದೆ. ಕಳೆದ 26 ದಿನಗಳ ಕಾಲ ನೀರು ಹರಿಸಿದಕ್ಕೆ ಅಣೆಕಟ್ಟೆಯಲ್ಲಿ 5 ಟಿಎಂಸಿ ನೀರು ಖಾಲಿಯಾಗಿದೆ. ಇದೇ ರೀತಿ ಸತತವಾಗಿ ನೀರು ಹರಿಸಿದರೆ, ನಮಗೆ ಡೆಡ್ ಸ್ಟೋರೆಜ್ ಕೇವಲ 18 ಟಿಎಂಸಿ ನೀರು ಮಾತ್ರ ಉಳಿಯುತ್ತದೆ. ಹಿಂದೆ ಕಾಡಾದ ಐಸಿಸಿ ಕಮಿಟಿಯಲ್ಲಿ ರೈತರು ಸಹ ಸದಸ್ಯರಾಗಿದ್ದರು. ಆದರೆ, ಹೊಸ ಸರ್ಕಾರ ಡಿಸಿಎಂ ಡಿ.ಕೆ. ಶಿವಕುಮಾರ್ ರೈತರನ್ನು ಸಮಿತಿಯಿಂದ ಹೊರಗೆ ಇಟ್ಟಿದ್ದಾರೆ. ಇಂತಹ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ಹೋಗಬೇಕು. ಅಧಿಕಾರಿಗಳು ಸಹ ತಮಗೆ ಆಗದೆ ಹೋದರೆ ರಾಜೀನಾಮೆ ನೀಡಬೇಕೆಂದು ರೈತ ಮುಖಂಡ ನಂಜುಂಡಪ್ಪ ಅಗ್ರಹಿಸಿದ್ದಾರೆ.
ಇದನ್ನೂ ಓದಿ: Sanatana Dharma Row; ಉದಯನಿಧಿ ಸ್ಟಾಲಿನ್ ವಿರುದ್ಧ ಶ್ರೀರಾಮಸೇನೆಯಿಂದ ದೂರು